ಸುಪಾರಿ ಕೊಟ್ಟು ಗಂಡನನ್ನು ಕೊಂದವಳು ಅಂದರ್

ಬೆಂಗಳೂರು : ಗಂಡನಿಗೆ ಹೆಂಡತಿ ಮೇಲೆ ಸಣ್ಣ ಅನುಮಾನ. ಗಂಡನ ವರ್ತನೆಯಿಂದ ಪತ್ನಿ ತನ್ನ ಮಗನ ಜೊತೆಗೂಡಿ ಗಂಡನ ಕೊಲೆಗೆ ಸುಪಾರಿ ಕೊಟ್ಟು ಸಿಕ್ಕಿ ಬಿದ್ದಿದ್ದಾಳೆ. ಸರ್ವರಿ ಬೇಗಂ ಎಂಬ ಮಹಿಳೆ ಮೊಹಮ್ಮದ್ ಹಂಜಲ್ ಎಂಬಾತನನ್ನು ಮದುವೆಯಾಗಿದ್ದಳು. ಅವರಿಗೆ ಮೂವರು ಹೆಣ್ಣುಮಕ್ಕಳು ಹಾಗೂ ಒಬ್ಬ ಗಂಡು ಮಗನಿದ್ದು ನಗರದ ಹೆಗ್ಗನಹಳ್ಳಿಯಲ್ಲಿ ವಾಸವಾಗಿದ್ದರು.

ಆದರೆ, ಸರ್ವರಿ ಬೇಗಂಳ ಗಂಡ ಮೊಹಮ್ಮದ್ ಹಂಜಲ್ ಗೆ ಪತ್ನಿಯ ಮೇಲೆ ಸದಾ ಸಣ್ಣ ಅನುಮಾನ ಕಾಡುತ್ತಿತ್ತು. ಇದರಿಂದ ಮನೆಯಲ್ಲಿ ಆಗಾಗ ಜಗಳ ಕೂಡ ಆಗುತ್ತಿತ್ತು. ಇದರಿಂದ ಬೇಸತ್ತ ಸರ್ವರಿ ಬೇಗಂ ಮತ್ತು ಮಗ ಶಪೀಉರ್ ರೆಹಮಾನ್ ತನ್ನ ಗಂಡನ ಕೊಲೆಗೆ ಸ್ಕೆಚ್ ಹಾಕಿದ್ದರು.ಇದಕ್ಕಾಗಿ ತನ್ನ ಸ್ನೇಹಿತ ಸೈಯದ್ ಅವೇಜ್‍ನನ್ನು ಕರೆಸಿದ ಅವನಿಗೆ ನಾಲ್ಕೂವರೆ ಲಕ್ಷ ಸುಪಾರಿ ಕೊಟ್ಟು ತನ್ನ ತಂದೆ ಕೊಲೆಗೆ ಸೂಚನೆ ನೀಡಿದ್ದ. ಮೂವರು ಆರೋಪಿಗಳು ಫೆಬ್ರವರಿ 10ರಂದು ಹೆಗ್ಗನಹಳ್ಳಿಯ ಮೊಹಮ್ಮದ್ ಹಂಜಲ್ ಮನೆಗೆ ಹೋಗಿದ್ದರು. ಅಂದು ರಾತ್ರಿ ಊಟದಲ್ಲಿ ಆರು ನಿದ್ದೆಯ ಮಾತ್ರೆಗಳನ್ನ ಹಾಕಿದ್ದರು. ಮೊಹಮ್ಮದ್ ಹಂಜಲ್ ಗಾಢ ನಿದ್ದೆಗೆ ಜಾರಿದ್ದು, ಬೆಳಗಿನ ಜಾವ ಮೂರು ಗಂಟೆ ಸಮಯದಲ್ಲಿ ಆರೋಪಿಗಳು ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ.

ಮೊಹಮ್ಮದ್ ಹಂಜಲ್ ಸಾವನ್ನಪ್ಪಿದ ಬಳಿಕ ಆರೋಪಿಗಳು ಹೃದಯಾಘಾತವಾಗಿ ಸಾವನ್ನಪ್ಪಿದ್ದಾರೆ ಎಂದು ಕಥೆ ಕಟ್ಟಿ ಸ್ಥಳೀಯರನ್ನ ನಂಬಿಸಿದ್ದಾರೆ. ಮರುದಿನ ಪಕ್ಕದ ತಿಗಳರಪಾಳ್ಯದ ಸ್ಮಶಾನದಲ್ಲಿ ಅಂತ್ಯ ಸಂಸ್ಕಾರ ಮಾಡಿದ್ದಾರೆ. ಆದರೆ, ಕೆಲವು ದಿನಗಳ ಬಳಿಕ ಮೊಹಮ್ಮದ್ ಹಂಜಲ್ ಸಾವಿನ ಬಗ್ಗೆ ಅನಾಮಿಕ ಮೂಕರ್ಜಿಯೊಂದು ಪೊಲೀಸ್ ಠಾಣೆಗೆ ತಲುಪಿದೆ. ಬಳಿಕ ಮೃತನ ಪತ್ನಿ ಸರ್ವರಿ ಬೇಗಂ ಮತ್ತು ಮಗ ಶಪೀಉರ್ ರೆಹಮಾನ್ ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬೆಳಕಿಗೆ ಬಂದಿದ್ದು, ಪೊಲೀಸರು ಈ ಐವರನ್ನು ಬಂಧಿಸಿದ್ದಾರೆ.

 

NEWS DESK

TIMES OF BENGALURU