ಸಿದ್ದರಾಮಯ್ಯನನ್ನು ಪರ್ಮನೆಂಟಾಗಿ ವಿಪಕ್ಷದಲ್ಲಿ ಕೂರಿಸ್ತೀನಿ

ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 135 ಕ್ಷೇತ್ರಗಳಲ್ಲಿ ಜಯ ಸಾಧಿಸಲಿದೆ. ಸಿದ್ದರಾಮಯ್ಯ ಅವರನ್ನು ಶಾಶ್ವತವಾಗಿ ವಿರೋಧ ಪಕ್ಷದಲ್ಲಿ ಕೂರಿಸುವುದು ಶತಸಿದ್ಧ. ಒಂದು ವೇಳೆ ಹಾಗಾಗದಿದ್ದರೆ ನನ್ನನ್ನು ಯಡಿಯೂರಪ್ಪ ಎಂದು ಕರೆಯಬೇಡಿ ಎಂದು ಸಿಎಂ ಸವಾಲು ಹಾಕಿದರು. ಸರ್ಕಾರ ಹಾಗೂ ಬಿಜೆಪಿಯನ್ನು ನೇರವಾಗಿ ಎದುರಿಸುವ ಧೈರ್ಯವಿರದ ಸಿದ್ದರಾಮಯ್ಯ ಹಾಗೂ ಟೀಂ, ಬಜೆಟ್ ಅಧಿವೇಶನದ ವೇಳೆ ಸಭಾತ್ಯಾಗ ಮಾಡಿ ಪಲಯಾನ ಮಾಡಿದೆ ಎಂದು ಬಿಎಸ್‌ವೈ ಹರಿಹಾಯ್ದರು.

ಬಜೆಟ್ ಮಂಡನೆ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಕೊರೊನಾ ಹಾವಳಿಯಿಂದ ಎದುರಾಗಿರುವ ಆರ್ಥಿಕ ಸಂಕಷ್ಟದ ಹೊರತಾಗಿಯೂ ಉತ್ತಮ ಬಜೆಟ್ ಮಂಡಿಸಿದ ಸಂತೃಪ್ತಿ ಇದೆ ಎಂದು ಹೇಳಿದರು. ಎಂಟನೇ ಬಾರಿಗೆ ಬಜೆಟ್ ಮಂಡನೆ ಮಾಡಿದ್ದೇನೆ. ಆದರೆ ಇದು ಅತ್ಯಂತ ಸಂಕಷ್ಟದ ಸನ್ನಿವೇಶದಲ್ಲಿ ರೂಪಿಸಿದ ಬಜೆಟ್ ಎಂದು ಯಡಿಯೂರಪ್ಪ ಬಜೆಟ್ ರಚನೆಯ ತಮ್ಮ ಅನುಭವಗಳನ್ನು ಬಿಚ್ಚಿಟ್ಟರು.

ಜನಸಾಮಾನ್ಯರ ಮೇಲೆ ಒಂದೇ ಒಂದು ಪೈಸೆ ಹೆಚ್ಚುವರಿ ತೆರಿಗೆ ಹಾಕಿಲ್ಲ. ಆರ್ಥಿಕ ಸಂಕಷ್ಟದ ನಡುವೆಯೂ ತೆರಿಗೆ ಸಮತೋಲನ ಕಾಯ್ದುಕೊಳ್ಳುವಲ್ಲಿ ನಾವು ಯಶಸ್ವಿಯಾಗಿದ್ದೇವೆ ಎಂದು ಬಿಎಸ್‌ವೈ ನುಡಿದರು. ಕೊರೊನಾ ವೈರಸ್ ಹಾವಳಿ ಹಾಗೂ ಲಾಕ್‌ಡೌನ್ ಪರಿಣಾಮವಾಗಿ ರಾಜಸ್ವ ಸಂಗ್ರಹಣೆಗೆ ಪೆಟ್ಟು ಬಿದ್ದಿದೆ ಆದರೂ ಅಭಿವೃದ್ಧಿ ಕಾರ್ಯಗಳಿಗೆ ಸೂಕ್ತ ಅನುದಾನ ಒದಗಿಸಿದ್ದೇನೆ ಎಂದು ಬಿಎಸ್‌ವೈ ಹೇಳಿದರು.
ಜನ ಕಲ್ಯಾಣ ಕಾರ್ಯಕ್ರಮಕ್ಕೆ ಅನುದಾನ ಕೊರತೆ ಆಗದಂತೆ ಎಚ್ಚರಿಕೆ ವಹಿಸಲಾಗಿದ್ದು, ಇದೊಂದು ಸರ್ವವ್ಯಾಪ್ತಿ, ಸರ್ವಸ್ಪರ್ಶಿ ಹಾಗೂ ಸಮತೋಲಿತ ಬಜೆಟ್ ಎಂದು ಮುಖ್ಯಮಂತ್ರಿ ಸಮರ್ಥನೆ ನೀಡಿದರು.

 

NEWS DESK

TIMES OF BENGALURU