ಚಿನ್ನಾಭರಣಕ್ಕಾಗಿ ವೃದ್ಧೆಯನ್ನು ಕೊಂದ ಮಹಿಳೆ

ಬೆಂಗಳೂರು: ಚಿನ್ನಾಭರಣಕ್ಕಾಗಿ ವೃದ್ಧೆಯ ಕತ್ತು ಹಿಸುಕಿ, ಉಸಿರುಗಟ್ಟಿಸಿ ಕೊಲೆ ಮಾಡಿದ್ದ ಆರೋಪಿಯನ್ನು ಬೆಂಗಳೂರಿನ ಅಶೋಕ್ ನಗರ ಪೊಲೀಸರು ಬಂಧಿಸಿದ್ದಾರೆ.  ಆನೇಪಾಳ್ಯದ ನಿವಾಸಿ 62 ವರ್ಷದ ದಿಲ್ವಾನ್ ಬಾನು ಎಂಬಾಕೆಯನ್ನು ಕೊಲೆ ಮಾಡಿದ ಆರೋಪದಡಿಯಲ್ಲಿ  ಶಬಾನಾ ಎಂಬಾಕೆಯನ್ನು ಬಂಧಿಸಿದ್ದಾರೆ. ಆರೋಪಿ ಶಬಾನಾ ಚೀಟಿ ವ್ಯವಹಾರ ನಡೆಸುತ್ತಿದ್ದಳು ಚೀಟಿ ವ್ಯವಹಾರದಲ್ಲಿ ನಷ್ಟ ಉಂಟಾಗಿ ಜನರಿಗೆ ಹಣ ನೀಡಲು ಚಿನ್ನಾಭರಣ ಕಳ್ಳತನಕ್ಕೆ ಇಳಿದಿದ್ದಳು.

ಮಾರ್ಚ್ 4ರಂದು ಮಧ್ಯಾಹ್ನ ಮಗ ಮತ್ತು ಸೊಸೆ ಹೊರಗಡೆ ಹೋಗುವುದನ್ನ ಕಂಡು ತನ್ನ ಸಂಬಂಧಿಯಾಗಿದ್ದ ದಿಲ್ವಾನ್ ಬಾನು ಮನೆಗೆ ಕಳ್ಳತನ ಮಾಡಲೆಂದು ಹೋಗಿದ್ದ ಆಕೆ ಕಳ್ಳತನದ ವೇಳೆ ಮನೆಯಲ್ಲಿದ್ದ ವೃದ್ಧೆಯನ್ನು ಕೊಲೆ ಮಾಡಿದ್ದಳು. ಕೊಲೆಯಾದ ದಿಲ್ವಾನ್ ಬಾನುಗೆ ಆರೋಪಿ ಶಬಾನಾ ಸಂಬಂಧಿಯಾಗಿದ್ದಳು. ಮಾತನಾಡುವ ನೆಪದಲ್ಲಿ ಆಕೆಯ ಮನೆಗೆ ಹೋಗಿದ್ದ ಶಬಾನಾ ವೃದ್ಧೆ ದಿಲ್ವಾನ್ ಬಾನು ಅವರ ಕುತ್ತಿಗೆ ಮೇಲೆ ಕಾಲಿಟ್ಟು ಉಸಿರುಗಟ್ಟಿಸಿ ಕೊಲೆ ಮಾಡಿದ್ದಳು. ಕೊಲೆ ಮಾಡಿದ ನಂತರ ದಿಲ್ವಾನ್ ಬಾನು ಅವರ ಮನೆಯಲ್ಲಿದ್ದ ಚಿನ್ನಾಭರಣ, ಹಣ ತೆಗೆದುಕೊಂಡು ಶಬಾನಾ ಪರಾರಿಯಾಗಿದ್ದಳು.

ಬಳಿಕ ಅನುಮಾನಸ್ಪಾದವಾಗಿ ಆ ಮನೆಯ ಸುತ್ತ ಓಡಾಡಿದ್ದ ಆರೋಪಿ ಶಬಾನಾಳ ಚಲನವಲನ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಸಿಸಿಟಿವಿ ಪರಿಶೀಲನೆ ನಡೆಸಿದ ಪೊಲೀಸರು ಮಹಿಳೆಯನ್ನು ವಶಕ್ಕೆ ಪಡೆದಿದ್ದರು. ವಿಚಾರಣೆ ವೇಳೆ ಕೊಲೆ ಮಾಡಿದ ಬಗ್ಗೆ ಬಾಯ್ಬಿಟ್ಟ ಶಬಾನಾ ವಿರುದ್ಧ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯ ವಿಚಾರಣೆಯನ್ನು ಪೊಲೀಸರು ಮುಂದುವರೆಸಿದ್ದಾರೆ.

NEWS DESK

TIMES OF BENGALURU