ಕ್ರಿಕೆಟ್ ಬೆಟ್ಟಿಂಗ್ ; ಪೊಲೀಸ್ ಪೇದೆ ಅಮಾನತು

ಬೆಂಗಳೂರು : ಆನ್‍ಲೈನ್ ಆಪ್‍ಗಳ ಮೂಲಕ ಕ್ರಿಕೆಟ್ ಬೆಟ್ಟಿಂಗ್ ಆಡುತ್ತಿದ್ದ ಆರೋಪಿಗಳಿಗೆ ಸಹಕರಿಸಿದ ಆರೋಪದ ಹಿನ್ನೆಲೆಯಲ್ಲಿ ಉಪ್ಪಾರಪೇಟೆಯ ಪೊಲೀಸ್ ಕಾನ್‍ಸ್ಟೇಬಲ್ ನನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.

ಶಿವಕುಮಾರ್ ಅಮಾನತಿಗೆ ಒಳಪಟ್ಟ ಪೊಲೀಸ್ ಕಾನ್‍ಸ್ಟೇಬಲ್. ಬಿಗ್ ಬ್ಯಾಶ್ ಮ್ಯಾಚ್ ಆಪ್‍ನಲ್ಲಿ ಕ್ರಿಕೆಟ್ ಬೆಟ್ಟಿಂಗ್ ಆಡುತಿದ್ದ ಆರು ಮಂದಿ ಆರೋಪಿಗಳನ್ನು ನಂದಿನಿ ಬಡಾವಣೆ ಪೊಲೀಸರು ಬಂಧಿಸಿದ್ದರು. ಈ ವೇಳೆ ಹನ್ನೊಂದು ಸಾವಿರ ನಗದು, ಆರು ಮೊಬೈಲ್ ವಶಪಡಿಸಿಕೊಂಡಿದ್ದರು. ಆರೋಪಿಗಳ ವಿಚಾರಣೆ ವೇಳೆ ಪೊಲೀಸ್ ಕಾನ್‍ಸ್ಟೇಬಲ್ ಶಿವಕುಮಾರ್ ಹೆಸರು ಬಾಯಿಬಿಟ್ಟಿದ್ದರು.

ಬೆಟ್ಟಿಂಗ್ ಆಡಲು ಆರೋಪಿಗಳಿಗೆ ಸಹಕರಿಸುತ್ತಿದ್ದ ಸಂಗತಿ ಬೆಳಕಿಗೆ ಬಂದಿತ್ತು. ಈ ಕುರಿತು ಉತ್ತರ ವಿಭಾಗದ ಡಿಸಿಪಿ ಧರ್ಮೇಂದ್ರ ಕುಮಾರ್ ಅವರು ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ ಎಂ. ಪಾಟೀಲ ಅವರಿಗೆ ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಉಪ್ಪಾರಪೇಟೆ ಕಾನ್‍ಸ್ಟೇಬಲ್ ಶಿವಕುಮಾರ್‌ನನ್ನು ಅಮಾನತು ಮಾಡುವಂತೆ ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ ಎಂ. ಪಾಟೀಲ ಆದೇಶ ಮಾಡಿದ್ದಾರೆ.

NEWS DESK

TIMES OF BENGALURU