ರಾಬರ್ಟ್​ ಅಬ್ಬರಕ್ಕೆ ಗಲ್ಲಾ ಪೆಟ್ಟಿಗೆ ಉಡೀಸ್..!

ಬೆಂಗಳೂರು :  ಭಾರೀ ನಿರೀಕ್ಷೆಗಳೊಂದಿಗೆ ತೆರೆಕಂಡ ‘ರಾಬರ್ಟ್​’ ಚಿತ್ರಕ್ಕೆ ಪ್ರೇಕ್ಷಕರು ಫುಲ್​ ಮಾರ್ಕ್ಸ್​ ನೀಡಿದ್ದಾರೆ. ಅದರ ಪರಿಣಾಮವಾಗಿ ಬಾಕ್ಸ್​ ಆಫೀಸ್​ನಲ್ಲಿ ಈ ಚಿತ್ರಕ್ಕೆ ಉತ್ತಮ ಕಮಾಯಿ ಆಗುತ್ತಿದೆ. ಸತತ ನಾಲ್ಕು ದಿನಗಳ ಕಾಲ ಬಹುತೇಕ ಚಿತ್ರಮಂದಿರಗಳಲ್ಲಿ ‘ರಾಬರ್ಟ್​’ ಹೌಸ್​ಫುಲ್​ ಪ್ರದರ್ಶನ ಕಂಡಿದೆ. ಈವರೆಗೂ ಒಟ್ಟು 59.8 ಕೋಟಿ ರೂ. ಕಲೆಕ್ಷನ್​ ಆಗಿದೆ.

ಕೊರೊನಾ ಲಾಕ್​ಡೌನ್​ ಕಾರಣದಿಂದ ಎಲ್ಲ ಭಾಷೆಯ ಚಿತ್ರರಂಗಗಳು ಸೊರಗಿದ್ದವು. ಯಾವುದೇ ವಹಿವಾಟು ಇಲ್ಲದೆ ಹೀನಾಯವಾಗಿ ಮಲಗಿದ್ದ ಚಿತ್ರೋದ್ಯಮಕ್ಕೆ ರಾಬರ್ಟ್​ ಸಿನಿಮಾದಿಂದಾಗಿ ಹೊಸ ಚೈತನ್ಯ ಸಿಕ್ಕಿದೆ. ಬಿಡುಗಡೆಯಾದ ಮೊದಲ ದಿನವೇ (ಮಾ.11) ಈ ಸಿನಿಮಾ 17.24 ಕೋಟಿ ರೂ. ಬಾಚಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿತ್ತು. ಅಲ್ಲಿಂದ ಮುಂದಿನ ಮೂರು ದಿನವೂ ಭರ್ಜರಿ ಕಲೆಕ್ಷನ್​ ಆಗಿದೆ. ಎನ್ನುವ ಮಾಹಿತಿ ಸಿಕ್ಕಿದೆ.

ಎರಡನೇ ದಿನ 12.78 ಕೋಟಿ, ಮೂರನೇ ದಿನ 14.10 ಕೋಟಿ ಹಾಗೂ ನಾಲ್ಕನೇ ದಿನ ಬರೋಬ್ಬರಿ 15.68 ಕೋಟಿ ರೂ. ಹರಿದುಬಂದಿದೆ. ಈ ನಾಲ್ಕು ದಿನಗಳ ಕಲೆಕ್ಷನ್​ ಸೇರಿದರೆ 59.8 ಕೋಟಿ ರೂ. ಆಗಲಿದೆ. ನಾಲ್ಕೇ ದಿನದಲ್ಲಿ ಹಾಫ್​ ಸೆಂಚುರಿ ಬಾರಿಸಿದ ಕೀರ್ತಿ ರಾಬರ್ಟ್​ಗೆ ಸಲ್ಲುತ್ತದೆ. ಈ ಗೆಲುವನ್ನು ದರ್ಶನ್​ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಎಲ್ಲ ಚಿತ್ರಮಂದಿರಗಳ ಎದುರು ಹಬ್ಬದ ವಾತಾವರಣ ನಿರ್ಮಾಣ ಆಗಿದೆ. ಫ್ಯಾಮಿಲಿ ಪ್ರೇಕ್ಷಕರು ಕೂಡ ಸಿನಿಮಾವನ್ನು ಮೆಚ್ಚಿಕೊಂಡಿರುವುದು ಚಿತ್ರತಂಡಕ್ಕೆ ಪ್ಲಸ್​ ಪಾಯಿಂಟ್​ ಆಗಿದೆ.

 

NEWS DESK

TIMES OF BENGALURU