ಕ್ರಿಕೆಟ್ ಆಡುವ ನೆಪದಲ್ಲಿ ಮೊಬೈಲ್ ಕಳ್ಳತನ

ಬೆಂಗಳೂರು: ಕ್ರಿಕೆಟ್ ಆಟವಾಡುವ ನೆಪದಲ್ಲಿ ಬೆಂಗಳೂರಿನ ವಿವಿಧ ಮೈದಾನಗಳಿಗೆ ಹೋಗಿ ಆಟಗಾರರ ಮೊಬೈಲ್ ಕಳವು ಮಾಡುತ್ತದ್ದ ಖದೀಮನನ್ನು ನಗರದ ಜಾಲಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಆರೋಪಿಯಿಂದ ಸುಮಾರು 4.5 ಲಕ್ಷ ರೂ. ಮೌಲ್ಯದ 38 ಮೊಬೈಲ್ ಫೋನ್‌ಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ. ಬಸವೇಶ್ವರನಗರದ ಬೋವಿ ಕಾಲನಿಯ ನಿವಾಸಿ ಎಂ.ರವಿ (29) ವರ್ಷ ಎಂಬುವನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.

ಕ್ರಿಕೆಟ್ ಆಡುವವನಂತೆ ಬಟ್ಟೆ ಧರಿಸಿ  ಪಂದ್ಯಾವಳಿ ನೋಡುತ್ತಾ ಕೂರುವವನು, ಈ ಸಮಯದಲ್ಲಿ ಆಟಗಾರರ ಮೊಬೈಲ್ ಕದಿಯುತ್ತಿದ್ದ. ನಂತರ ಕದ್ದ ಮೊಬೈಲ್ ಫೋನ್‌ಗಳನ್ನು ಬೇರೆ ಬೇರೆ ಅಂಗಡಿಗಳಲ್ಲಿ ಮಾರಿ ದುಡ್ಡು ಪಡೆಯುವುದು ಅವನ ಕಾರ್ಯವಾಗಿತ್ತು. ಈ ರೀತಿಯಾಗಿ ಆರೋಪಿಯು ಬಸವನಗುಡಿಯ ನ್ಯಾಷನಲ್ ಕಾಲೇಜ್ ಮೈದಾನ, ಜಾಲಹಳ್ಳಿಯ ಹೆಚ್.ಎಂ.ಟಿ. ಗ್ರಾಂಡ್ಸ್, ಮಲ್ಲೇಶ್ವರಂ, ಜಯನಗರ ಮತ್ತು ಬಾಗಲಗುಂಟೆ ಪ್ರದೇಶದ ಮೈದಾನಗಳಿಗೆ ನಿಯಮಿತವಾಗಿ ಹೋಗಿ ಮೊಬೈಲ್ ಕದಿಯುವ ಅಭ್ಯಾಸ ಹೊಂದಿದ್ದ ಎನ್ನಲಾಗಿದೆ. ಕದ್ದ ಐದಾರು ಮೊಬೈಲ್‌ಗಳನ್ನು ಕವರಿನಲ್ಲಿಟ್ಟುಕೊಂಡು ವಿ,ಪಿ,ರಸ್ತೆಯ ಮೊಬೈಲ್ ಅಂಗಡಿಗೆ ಮಾರುವುದಕ್ಕಾಗಿ ಅನುಮಾನಸ್ಪದವಾಗಿ ಓಡಾಡುತ್ತಿದ್ದಾಗ ಗಸ್ತಿನಲ್ಲಿದ್ದ ಪೇದೆಗಳಾದ ಶ್ರೀನಿವಾಸಮೂರ್ತಿ ಮತ್ತು ನವೀನ್‌ಕುಮಾರ್ ಅವರಿಗೆ ಸಿಕ್ಕಿಬಿದ್ದಿದ್ದಾನೆ. ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಳ್ಳತನದ ಸಂಗತಿ ಬೆಳಕಿಗೆ ಬಂದಿದ್ದು, ಆರೋಪಿಯ ಮೇಲೆ ಕೇಸ್ ದಾಖಲಿಸಲಾಗಿದೆ.

 

NEWS DESK

TIMES OF BENGALURU