ಪಿಎಚ್‌ಡಿ ನೇಮಕಾತಿಯಲ್ಲಿ ಅಕ್ರಮ; ಬೆಂಗಳೂರು ವಿವಿ ಬಂದ್

ಬೆಂಗಳೂರು: ಪಿಎಚ್‍ಡಿ ನೇಮಕಾತಿಯಲ್ಲಿ ಅಕ್ರಮ ಹಾಗೂ ಕುಲಪತಿ ವೇಣುಗೋಪಾಲ್ ಸರ್ವಾಧಿಕರಿ ಧೋರಣೆ ಖಂಡಿಸಿ ಬೆಂಗಳೂರು ವಿಶ್ವವಿದ್ಯಾಲಯವನ್ನು ಬಂದ್ ಮಾಡಲಾಗಿದೆ. ಸುಮಾರು 2 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಬೀದಿಗೆ ಇಳಿಯಲಿದ್ದು, ವಿವಿಯ ಎಲ್ಲಾ ಭಾಗಗಳಿಗೆ ಬೀಗ ಜಡಿಯುತ್ತಿದ್ದಾರೆ. ಎರಡು ವರ್ಷವಾದರೂ ಪಿಎಚ್‍ಡಿ ನೇಮಕಾತಿಯಲ್ಲಿ ಉಂಟಾಗಿರುವ ಗೊಂದಲ ನಿವಾರಿಸದ ಕಾರಣ ವಿದ್ಯಾರ್ಥಿ ಸಮುದಾಯ ಇದೀಗ ಹೋರಾಟಕ್ಕೆ ಇಳಿದಿದೆ. ಯುಜಿಸಿ ನಿಯಮಾವಳಿಗಳ ಪ್ರಕಾರ ಪ್ರತಿ ಪ್ರವೇಶಾತಿ ಪ್ರಕ್ರಿಯೆಯಲ್ಲಿ ಸಾಮನ್ಯ ವರ್ಗಕ್ಕೆ 55%, ಹಿಂದುಳಿದ ವರ್ಗಗಳಿಗೆ 50%, ಮತ್ತು ಪರಿಶಿಷ್ಟ ಜಾತಿ ಹಾಗೂ ವರ್ಗಗಳಿಗೆ 45% ಅರ್ಹತಾ ಅಂಕಗಳನ್ನು ನಿಗದಿಪಡಿಸಬೇಕು.

ಈ ಎಲ್ಲಾ ನಿಯಮಗಳು ಗಾಳಿಗೆ ತೂರಿ ಕಳೆದ ಎರಡು ವರ್ಷದಿಂದ ಪಿಎಚ್‍ಡಿ ಪ್ರವೇಶ ಪ್ರಕ್ರಿಯೆ ಗೊಂದಲದ ಗೂಡಾಗಿದೆ. ಇದಕ್ಕೆ ವಿವಿಯ ಕುಲಪತಿ ವೇಣುಗೋಪಾಲ್ ಸರ್ವಾಧಿಕಾರಿ ಧೋರಣೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಇದೀಗ ವಿದ್ಯಾರ್ಥಿಗಳು ವಿವಿ ಆಡಳಿತ ವಿಭಾಗದ ಕಚೇರಿ ಮುಂದೆ ಜಮಾಯಿಸಿದ್ದು, ಕುಲಪತಿ ವೇಣುಗೋಪಾಲ್ ಅವರ ಸರ್ವಾಧಿಕಾರ ಧೋರಣೆ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಲಿದ್ದೇವೆ ಎಂದು ಪಿಜಿ ವಿದ್ಯಾರ್ಥಿ ಒನ್ ಇಂಡಿಯಾ ಕನ್ನಡಕ್ಕೆ ತಿಳಿಸಿದ್ದಾರೆ. ಕುಲಪತಿಗಳು ತಮ್ಮ ಸರ್ವಾಧಿಕಾರ ಧೋರಣೆ ಬಿಟ್ಟು ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ತೀರ್ಮಾನ ಕೈಗೊಳ್ಳಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.

 

NEWS DESK

TIMES OF BENGALURU