ಅನೈತಿಕ ಸಂಬಂಧಕ್ಕೆ ಬಲಿಯಾದ ಪತಿ

ಬೆಂಗಳೂರು: ಅನೈತಿಕ ಸಂಬಂಧ ಹೊಂದಿದ್ದ ಮಹಿಳೆ ಪ್ರಿಯಕರನೊಂದಿಗೆ ಸೇರಿ ಗಂಡನನ್ನು ಕೊಲೆ ಮಾಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. 15 ದಿನಗಳ ನಂತರ ಪೊಲೀಸರ ತನಿಖೆಯಲ್ಲಿ ಕೊಲೆ ವಿಚಾರ ಗೊತ್ತಾಗಿದೆ. 42 ವರ್ಷದ ಚಂದ್ರಶೇಖರ್ ಕೊಲೆಯಾದ ಮೃತ ದುರ್ದೈವಿ.

ನೆರೆಮನೆಯ ಮನು ಎಂಬಾತನ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದ ಚಂದ್ರಶೇಖರ್ ಪತ್ನಿ ಫೆಬ್ರವರಿ 21 ರಂದು ಪ್ರಿಯಕರನೊಂದಿಗೆ ಸೇರಿ ರಾಡ್ ನಿಂದ ತಲೆಗೆ ಹೊಡೆದು ಕೊಲೆ ಮಾಡಿದ್ದಾರೆ. ಬಾತ್ರೂಮಿನಲ್ಲಿ ಕಾಲು ಜಾರಿ ಬಿದ್ದು ಮೃತಪಟ್ಟಿರುವುದಾಗಿ ನಂಬಿಸಿದ್ದಾರೆ ಎನ್ನುವುದು ಗೊತ್ತಾಗಿದೆ. 15 ವರ್ಷಗಳ ಹಿಂದೆ ಚಂದ್ರಶೇಖರ್ ದಂಪತಿಗೆ ಮದುವೆಯಾಗಿದ್ದು, ಹಿಂದೆ ತಲೆಗೆ ಪೆಟ್ಟು ಬಿದ್ದು ಚಂದ್ರಶೇಖರ್ ಗಂಭೀರವಾಗಿ ಗಾಯಗೊಂಡಿದ್ದರು.

ನಂತರದಲ್ಲಿ ಅವರಿಗೆ ಆಗಾಗ ಫಿಟ್ಸ್ ಬಂದು ಮೂರ್ಛೆ ಹೋಗುತ್ತಿದ್ದರು. ಫೆಬ್ರವರಿ 21 ರಂದು ರಾತ್ರಿ ಬಾತ್ರೂಮ್ ನಲ್ಲಿ ಆಕಸ್ಮಿಕವಾಗಿ ಬಿದ್ದು ಚಂದ್ರಶೇಖರ್ ಮೃತಪಟ್ಟಿರುವುದಾಗಿ ಪತ್ನಿ ನಂಬಿಸಿದ್ದಾಳೆ. ಕುಟುಂಬದವರು ಕೂಡ ಆಕಸ್ಮಿಕವಾಗಿ ಮೃತಪಟ್ಟಿರಬಹುದೆಂದು ಸುಮ್ಮನಾಗಿದ್ದಾರೆ. ವರ್ತೂರು ಠಾಣೆಯಲ್ಲಿ ಆಕಸ್ಮಿಕ ಸಾವು ಬಗ್ಗೆ ದೂರು ದಾಖಲಾಗಿದೆ. ಮೈಸೂರು ಕೆಆರ್ ನಗರದ ಚಿನಕುರಳಿಯಲ್ಲಿ ಚಂದ್ರಶೇಖರ್ ತಿಥಿ ನಡೆಯುವ ವೇಳೆ ಪತ್ನಿಯ ಪ್ರಿಯಕರ ಮನು ಕೂಡ ಬಂದಿದ್ದಾನೆ.

ಬೆಂಗಳೂರಿನ ವ್ಯಕ್ತಿ ಇಲ್ಲಿಗೆ ಬಂದಿದ್ದೇಕೆ ಎಂದು ಕುಟುಂಬದವರು ಪ್ರಶ್ನಿಸಿದಾಗ ಚಂದ್ರಶೇಖರ್ ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿರುವುದು ಗೊತ್ತಾಗಿದೆ. ಈ ವೇಳೆ ಮಹಿಳೆ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ಸೇರಿಕೊಂಡಿದ್ದಾಳೆ. ಚಂದ್ರಶೇಖರ್ ಕುಟುಂಬದವರು ಪೆÇಲೀಸರಿಗೆ ದೂರು ನೀಡಿದ್ದು, ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಗೊತ್ತಾಗಿದೆ.

NEWS DESK

TIMES OF BENGALURU