ಬೆಂಗಳೂರು: ಕೋವಿಡ್ ಕಾರಣದಿಂದ ಟೋಕನ್ ವಿತರಣೆಯನ್ನು ನಿಲ್ಲಿಸಿರುವ ಬೆಂಗಳೂರು ಮೆಟ್ರೊ ರೈಲು ನಿಗಮವು ಈಗ ಸಮರ್ಪಕವಾಗಿ ಸ್ಮಾರ್ಟ್ಕಾರ್ಡ್ ಕೂಡ ಪೂರೈಸದ ಕಾರಣ ತೊಂದರೆ ಅನುಭವಿಸಬೇಕಾಗಿದೆ ಎಂದು ಪ್ರಯಾಣಿಕರು ದೂರಿದ್ದಾರೆ.
ಗೊರಗುಂಟೆ ಪಾಳ್ಯ, ಜಾಲಹಳ್ಳಿ, ದಾಸರಹಳ್ಳಿ ನಿಲ್ದಾಣ ಸೇರಿದಂತೆ ನಗರದ ಬಹುತೇಕ ನಿಲ್ದಾಣಗಳಲ್ಲಿ ಸ್ಮಾರ್ಟ್ಕಾರ್ಡ್ ಕೊರತೆ ಇದೆ. ಅಧಿಕಾರಿಗಳ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದು ಬಿಎಂಆರ್ಸಿಎಲ್ ಕಾರ್ಮಿಕರ ಸಂಘದ ಸೂರ್ಯ ನಾರಾಯಣಮೂರ್ತಿ ದೂರಿದರು. ನಿಗದಿತ ಸಂಖ್ಯೆಯ ಸ್ಮಾರ್ಟ್ ಕಾರ್ಡ್ಗಳ ಸಂಗ್ರಹ ಇರುವಂತೆ ನೋಡಿಕೊಳ್ಳದೆ ಪ್ರಯಾಣಿಕರು ತೊಂದರೆ ಅನುಭವಿಸುವಂತೆ ಮಾಡಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಕೆಲವು ದಿನಗಳ ಹಿಂದೆ ಸ್ಮಾರ್ಟ್ಕಾರ್ಡ್ಗಳ ಕೊರತೆ ಉದ್ಭವಿಸಿತ್ತು. ಆದರೆ, ಈಗ ಸರಿಯಾಗಿದೆ. ಯಾವ ಪ್ರಯಾಣಿಕರನ್ನೂ ವಾಪಸ್ ಕಳುಹಿಸಿಲ್ಲ. ಸ್ಮಾರ್ಟ್ ಕಾರ್ಡ್ಗಳು ಸಂಪೂರ್ಣವಾಗಿ ಖಾಲಿಯಾದರೆ ಕಾಗದದ ಟಿಕೆಟ್ ನೀಡಿ ಪ್ರಯಾಣಿಸಲು ಅವಕಾಶ ನೀಡುವ ವ್ಯವಸ್ಥೆಯನ್ನೂ ಮಾಡಿಕೊಳ್ಳಲಾಗಿದೆ ಎಂದು ನಿಗಮದ ಅಧಿಕಾರಿ ತಿಳಿಸಿದ್ದಾರೆ. ಟೋಕನ್ ವಿತರಣೆ ಸ್ಥಗಿತಗೊಳಿಸಿರುವುದರಿಂದ ಸ್ಮಾರ್ಟ್ಕಾರ್ಡ್ ಬಳಕೆ ಹೆಚ್ಚಾಗಿದ್ದು ಕೆಲವು ಕಡೆಗಳಲ್ಲಿ ಮಾತ್ರ ಕೊರತೆ ಉದ್ಭವಿಸಿದೆ ಎಂದು ಹೇಳಿದ್ದಾರೆ. ಯಾವುದೇ ಪ್ರಯಾಣಿಕರಿಗೂ ತೊಂದರೆಯಾಗಿಲ್ಲ’ ಎಂದೂ ಅವರು ಸ್ಪಷ್ಟಪಡಿಸಿದರು.
NEWS DESK
TIMES OF BENGALURU