ಬೆಂಗಳೂರು: ಬಡವರ ಅನ್ನಭಾಗ್ಯ ಯೋಜನೆಯಾದ ಇಂದಿರಾ ಕ್ಯಾಂಟೀನ್ ಮುಚ್ಚುವ ಪ್ರಯತ್ನವನ್ನು ಬಿಜೆಪಿ ಸರ್ಕಾರ ಮಾಡುತ್ತಿದೆ ಎಂದು ಆರೋಪಿಸಿ ಇಂದು ಬಿಬಿಎಂಪಿ ಕೇಂದ್ರ ಕಚೇರಿ ಮುಂದೆ ಕೆಪಿಸಿಸಿ ಕಾರ್ಮಿಕ ಘಟಕದವರು ಪ್ರತಿಭಟನೆ ನಡೆಸಿದರು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮಂಡಿಸಿದ 2021-2022ರ ಆಯವ್ಯಯದಲ್ಲಿ ಇಂದಿರಾ ಕ್ಯಾಂಟೀನ್ಗೆ ಮೀಸಲಿಡಬೇಕಾದ ಅನುದಾನ ನೀಡಿಲ್ಲ ಈ ಮೂಲಕ ಹಸಿವು ಮುಕ್ತ ಭಾರತ ಮತ್ತು ಆಹಾರ ಭದ್ರತೆ ಕಲ್ಪನೆಯನ್ನು ಗಾಳಿಗೆ ತೂರಿದ್ದಾರೆ ಎಂದು ಕಾರ್ಮಿಕ ಘಟಕದ ರಾಜ್ಯಾಧ್ಯಕ್ಷ ಪುಟ್ಟಸ್ವಾಮಿಗೌಡ ಪ್ರತಿಭಟನೆ ವೇಳೆ ಆರೋಪಿಸಿದರು. ಬಡವರಿಗಾಗಿ ಕನಿಷ್ಠ ಬೆಲೆಯಲ್ಲಿ ಉಪಹಾರ ಮತ್ತು ಊಟದ ವ್ಯವಸ್ಥೆಯನ್ನು ಇಂದಿರಾ ಕ್ಯಾಂಟೀನ್ ಮೂಲಕ ನೀಡುವುದು ಹಿಂದಿನ ಸರ್ಕಾರ ಜಾರಿಗೆ ತಂದಿತ್ತು.
ಆದರೆ ಈಗ ಇದು ಮುಚ್ಚುವ ನಿಟ್ಟಿನಲ್ಲಿ ಇರುವರು ಆದ ಕಾರಣ ಸರ್ಕಾರ ಎಚ್ಚೆತ್ತುಕೊಂಡು ಇಂದಿರಾ ಕ್ಯಾಂಟೀನ್ ಯೋಜನೆಗೆ ಅನುದಾನವನ್ನು ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು. ಲಕ್ಷಾಂತರ ಜನರ ಹಸಿವು ನೀಗಿಸಿಕೊಳ್ಳುತ್ತಿರುವ ಇಂದಿರಾ ಕ್ಯಾಂಟೀನ್ ಸಮಯವನ್ನು ರಾತ್ರಿ 8 ಗಂಟೆಗೆ ಮುಚ್ಚುವ ಬದಲಾಗಿ ರಾತ್ರಿ 10 ಗಂಟೆಯವರೆಗೆ ಆಹಾರ ಸರಬರಾಜು ಮಾಡಬೇಕೆಂದು ಆಗ್ರಹಿಸಿದರು. ಕೆಪಿಸಿಸಿ ಬೆಂಗಳೂರು ನಗರ ಘಟಕ ಅಧ್ಯಕ್ಷ ಕೃಷ್ಣಪ್ಪ, ಉಪಾಧ್ಯಕ್ಷರಾದ ಹರಣೆಗೌಡ, ಚಂದ್ರಶೇಖರಯ್ಯ, ಪ್ರಧಾನ ಕಾರ್ಯದರ್ಶಿಗಳಾದ ಬಾಲರಾಜು ಹಾಗೂ ಶ್ರೀಕಾಂತ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
NEWS DESK
TIMES OF BENGALURU