ಕೇಬಲ್ ತೆರವುಗೊಳಿಸದಂತೆ ಸಿಎಂಗೆ ಮನವಿ

ಬೆಂಗಳೂರು: ನಗರದಲ್ಲಿ ಓ ಎಫ್ ಸಿ ಕೇಬಲ್‍ಗಳನ್ನು ನಿಯಮಬಾಹಿರವಾಗಿ ತೆರುವುಗೊಳಿಸುತ್ತಿರುವುದಕ್ಕೆ ಕರ್ನಾಟಕ ರಾಜ್ಯ ಕೇಬಲ್ ಟಿವಿ ಆಪರೇಟರ್ಸ್ ಅಸೋಸಿಯೇಷನ್‍ಗೆ ಆಕ್ಷೇಪ ವ್ಯಕ್ತಪಡಿಸಿದೆ. ಮುಖ್ಯಮಂತ್ರಿಯವರನ್ನು ಭೇಟಿ ಮಾಡಿದ ಅಸೋಸಿಯೇಷನ್ ಪದಾಧಿಕಾರಿಗಳು, ಬಿಬಿಎಂಪಿಯಿಂದ ಕೈಗೊಂಡಿರುವ ಕೇಬಲ್ ತೆರವು ಕಾರ್ಯಾಚರಣೆಯನ್ನು ತಕ್ಷಣ ನಿಲ್ಲಿಸುವಂತೆ ಮನವಿ ಮಾಡಿಕೊಂಡರು. ಯಡಿಯೂರಪ್ಪನವರನ್ನು ಭೇಟಿ ಮಾಡಿದ ಕರ್ನಾಟಕ ರಾಜ್ಯ ಕೇಬಲ್ ಟಿವಿ ಆಪರೇಟರ್ಸ್ ಅಸೋಸಿಯೇಷನ್ ಅಧ್ಯಕ್ಷ ವಿ.ಎಸ್.ಪ್ಯಾಟ್ರೀಕ್ ನೇತೃತ್ವದ ನಿಯೋಗ ಕೇಬಲ್ ಉದ್ಯಮದ ಸಂಕಷ್ಟಗಳ ಕುರಿತು ಮನವರಿಕೆ ಮಾಡಿಕೊಟ್ಟಿದೆ. ಯಾವುದೇ ಸೂಚನೆ ನೀಡದೆ ಏಕಪಕ್ಷೀಯವಾಗಿ ಓ ಎಫ್ ಸಿ ಕೇಬಲ್‍ಗಳನ್ನು ತೆರವು ಮಾಡುತ್ತಿರುವುದರಿಂದ ಉದ್ಯಮಕ್ಕೆ ಲಕ್ಷಾಂತರ ರೂಪಾಯಿ ನಷ್ಟವಾಗುತ್ತದೆ.

ಕಳೆದ ಮೂರು ದಶಕದಿಂದ ಕೇಬಲ್ ಉದ್ಯಮ ನಡೆಸುತ್ತಿರುವ ಕುಟುಂಬಗಳಿಗೆ ಇದರಿಂದ ತೊಂದರೆಯಾಗುತ್ತದೆ. ಸಿಎಟಿಎ ಕಾಯ್ದೆಯಡಿ ಸೂಕ್ತ ಅನುಮತಿ ಪಡೆದು ನಡೆಯುತ್ತಿರುವ ಕೇಬಲ್ ಉದ್ಯಮವು ಮಾಹಿತಿ ಮತ್ತು ಪ್ರಸಾರ ಇಲಾಖೆಯ ನಿಬಂಧನೆಗೆ ಒಳಪಟ್ಟಿದೆ. ಬೆಂಗಳೂರು ನಗರದಲ್ಲಿ ಇಂಟರ್ನೆಟ್ ಮತ್ತು ಬ್ರಾಡ್ ಬ್ಯಾಂಡ್‍ಗಳನ್ನು ಬಳಕೆ ಮಾಡುತ್ತಿರುವವರಿಗೂ ಇದರಿಂದ ನಷ್ಟವಾಗುತ್ತದೆ. ಹೀಗಾಗಿ ತಕ್ಷಣ ಕೇಬಲ್ ತೆರವು ಕಾರ್ಯಾಚರಣೆಯನ್ನು ನಿಲ್ಲಿಸುವಂತೆ ಅಸೋಸಿಯೇಷನ್ ಪದಾಧಿಕಾರಿಗಳು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು. ಈ ಕುರಿತು ಸಂಬಂಧಿಸಿದ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡೋದಾಗಿ ಸಿಎಂ ಯಡಿಯೂರಪ್ಪ ಅವರು ಪದಾಧಿಕಾರಿಗಳಿಗೆ ಭರವಸೆ ನೀಡಿದರು.

NEWS DESK
TIMES OF BENGALURU