ಇದೊಂದು ಪಾವಿತ್ರ್ಯತೆ ಇಲ್ಲದ ಬಜೆಟ್

ಬೆಂಗಳೂರು: ಇದೊಂದು ಪಾವಿತ್ರ್ಯತೆ ಇಲ್ಲದ ಬಜೆಟ್ ಆಗಿದೆ. ಇದನ್ನು ಒಪ್ಪಿದರೆ ಇತಿಹಾಸದಲ್ಲಿ ಕಳಂಕವಾಗಿ ಉಳಿಯಲಿದೆ ಎಂದು ಜೆಡಿಎಸ್ ಶಾಸಕ ಎ.ಟಿ.ರಾಮಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು. ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆ ವೇಳೆ ಮಾತನಾಡಿದ ಅವರು, ಬಂಡವಾಳ ವೆಚ್ಚ ಕಡಿಮೆ ಮಾಡಿದರೆ ಅಭಿವೃದ್ದಿ ಹೇಗೆ ಸಾಧ್ಯ?. ಸರ್ಕಾರ ಹಣಕಾಸು ಇಲಾಖೆಯ ಅಧೀನದಲ್ಲಿರಬಾರದು. ಸರಿಯಾದ ಆಡಳಿತ ಇಲ್ಲದಿದ್ದರೆ ಅದರ ದುಷ್ಪರಿಣಾಮವನ್ನು ರಾಜ್ಯದ ಜನರು ಅನುಭವಿಸಬೇಕಾಗುತ್ತದೆ ಎಂದರು. ಇತ್ತೀಚಿನ ದಿನಗಳಲ್ಲಿ ಶಾಶ್ವತ ಯೋಜನೆಗಳು ಮಾಯ ಆಗುತ್ತಿವೆ. ಕೃಷಿ, ಕೈಗಾರಿಕೆ ನಿರೀಕ್ಷಿತ ಅಭಿವೃದ್ದಿ ಆಗುತ್ತಿಲ್ಲ. ಕೃಷಿ ಪ್ರಧಾನ ದೇಶದಲ್ಲಿ ದೊಡ್ಡ ದುರಂತ ಇದು. ಜನಪ್ರಿಯ ಯೋಜನೆಗಳು ಹೆಚ್ಚಾಗಿರುವುದರಿಂದ ಶಾಶ್ವತ ಯೋಜನೆಗಳು ಮಾಯ ಆಗುತ್ತಿವೆ ಎಂದು ಬೇಸರ ವ್ಯಕ್ತ ಪಡಿಸಿದರು.

ಆಯವ್ಯಯದಲ್ಲಿ ಆಯಕ್ಕಿಂತ ವ್ಯಯವೇ ಹೆಚ್ಚಾಗಿದೆ. ಇದಕ್ಕೆ ಕಾರಣ ಒಳ್ಳೆಯ ಆಡಳಿತ ಇಲ್ಲದಿರುವುದು. ನಾವು ಸಾಲ ತೆಗೆದುಕೊಂಡು ಸರ್ಕಾರ ನಡೆಸಿಕೊಂಡು ಹೋಗುವ ಪ್ರವೃತ್ತಿ ಮುಂದುವರೆಯುತ್ತಿದೆ. ಇದಕ್ಕೆ ಆಡಳಿತ ವೈಪಲ್ಯವೇ ಕಾರಣ ಎಂದು ಕಿಡಿಕಾರಿದರು. ರಾಜ್ಯದಲ್ಲಿ ಯಾರದೋ ಸಹಾಯದಿಂದ ಯಡಿಯೂರಪ್ಪ ಸಿಎಂ ಆಗಿದ್ದಾರೆ. ಕೇಂದ್ರದಿಂದ ಕರ್ನಾಟಕಕ್ಕೆ ಅನ್ಯಾಯ ಆಗಿದೆ. ಯಡಿಯೂರಪ್ಪ ಕೇಂದ್ರದ ವಿರುದ್ದ ಗುಡುಗಬೇಕು, ಎಲ್ಲರೂ ಸಹಕಾರ ನೀಡಬೇಕು ಎಂದರು. ಹತ್ತಾರು ಸಾವಿರ ಕೋಟಿ ರೂ. ಅಧಿಕಾರಿಗಳ ವಯಕ್ತಿಕ ಖಾತೆಯಲ್ಲಿ ಬಿದ್ದಿದೆ. ಇದಕ್ಕೆ ಯಾರು ಜವಾಬ್ದಾರರು?. ಇದನ್ನು ಯಾರು ಕೇಳುವವರು?. ಹಣಕಾಸು ಇಲಾಖೆ ಏನು ಮಾಡುತ್ತಿದೆ. ಹಣಕಾಸು ಇಲಾಖೆಯವರು ಅನ್ನ ತಿನ್ನುತ್ತಾರ, ಮಣ್ಣು ತಿನ್ನುತ್ತಾರ? ಅಧಿಕಾರ ನಡೆಸುವವರು ನೀವಾ, ಅವರಾ ಎಂದು ಕಿಡಿ ಕಾರಿದರು.

NEWS DESK
TIMES OF BENGALURU