ಬೈಯಪ್ಪನಹಳ್ಳಿ ರೈಲ್ವೆ ಟರ್ಮಿನಲ್ ಲೋಕಾರ್ಪಣೆಗೆ ಸಿದ್ಧ

ಬೆಂಗಳೂರು: ಬೈಯಪ್ಪನಹಳ್ಳಿ ಬಳಿ ನಿರ್ಮಾಣವಾಗಿರುವ ಸರ್ ಎಂ. ವಿಶ್ವೇಶ್ವರಯ್ಯ ರೈಲ್ವೆ ಕೋಚಿಂಗ್ ಟರ್ಮಿನಲ್ ಲೋಕಾರ್ಪಣೆಗೆ ಸಿದ್ಧವಾಗಿದೆ. ವಿಮಾನ ನಿಲ್ದಾಣದ ಮಾದರಿಯ ಸೌಕರ್ಯಗಳೊಂದಿಗೆ ತಲೆ ಎತ್ತಿ ನಿಂತಿರುವ ರೈಲು ನಿಲ್ದಾಣ, ಉದ್ಘಾಟನೆಗೆ ಕಾಯುತ್ತಿದೆ.

ಸುಸಜ್ಜಿತವಾಗಿ ನಿರ್ಮಾಣಗೊಂಡಿರುವ ನಿಲ್ದಾಣ ಸುತ್ತಮುತ್ತಲ ಜನರ ಪ್ರವಾಸಿ ತಾಣವಾಗಿ ಮಾರ್ಪಟ್ಟಿದೆ. 2015-16ನೇ ಸಾಲಿನಲ್ಲಿ ಈ ನಿಲ್ದಾಣಕ್ಕೆ ರೈಲ್ವೆ ಮಂಡಳಿ ಮಂಜೂರಾತಿ ನೀಡಿತ್ತು. 2017ರಿಂದ ಕಾಮಗಾರಿ ಆರಂಭವಾಗಿದ್ದು, ಬಹುತೇಕ ಪೂರ್ಣಗೊಂಡಿದೆ. ಉದ್ಘಾಟನೆಗೆ ದಿನಾಂಕ ನಿಗದಿಯಾಗುವುದಷ್ಟೇ ಬಾಕಿ ಇದೆ.ಕಾಮಗಾರಿ ಮುಗಿದರೂ ಈ ನಿಲ್ದಾಣದಿಂದ ರೈಲುಗಳ ಕಾರ್ಯಾಚರಣೆಗೆ ಮೀನಮೇಷ ಎಣಿಸಲಾಗುತ್ತಿದೆ ಎಂದು ರೈಲ್ವೆ ಹೋರಾಟಗಾರರು ಬೇಸರ ವ್ಯಕ್ತಪಡಿಸುತ್ತಾರೆ.

ಕಾರ್ಯಾಚರಣೆ ಆರಂಭ ಯಾವಾಗ, ಅದಕ್ಕಿರುವ ತೊಡಕುಗಳೇನು, ಅಗತ್ಯ ಇರುವ ಸಿಬ್ಬಂದಿ ನೇಮಕವಾಗಿದೆಯೇ ಎಂಬುದನ್ನು ಅಧಿಕಾರಿಗಳು ಖಚಿತವಾಗಿ ಹೇಳುತ್ತಿಲ್ಲ’ ಎಂದು ರೈಲ್ವೆ ಹೋರಾಟಗಾರ ಸಂಜೀವ್ ದ್ಯಾಮಣ್ಣನವರ ತಿಳಿಸಿದರು.ಈ ರೈಲು ನಿಲ್ದಾಣಕ್ಕೆ ಬರಲು ಸಮರ್ಪಕ ಸಂಪರ್ಕ ರಸ್ತೆ ಇಲ್ಲದಿರುವುದು ಈ ವಿಳಂಬಕ್ಕೆ ಕಾರಣ ಇರಬಹುದು ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ನೈರುತ್ಯ ರೈಲ್ವೆ ಸಾರ್ವಜನಿಕ ಸಂಪರ್ಕಾಧಿಕಾರಿ ಇ. ವಿಜಯಾ, ಹಾಲಿ ಇರುವ ಸಿಬ್ಬಂದಿಯನ್ನೇ ಈ ನಿಲ್ದಾಣಕ್ಕೆ ಬಳಸಿಕೊಳ್ಳಲಾಗುವುದು. ಎಲ್ಲವೂ ಸಿದ್ಧವಿದ್ದು, ಉದ್ಘಾಟನೆಗೆ ದಿನಾಂಕ ನಿಗದಿಯಷ್ಟೇ ಬಾಕಿ ಇದೆ ಎಂದು ಸ್ಪಷ್ಟಪಡಿಸಿದರು.

NEWS DESK

TIMES OF BENGALURU