ಲಾಟರಿನಲ್ಲಿ ವಂಚಿಸುತ್ತಿದ್ದ ಮೂವರ ಬಂಧನ

ಬೆಂಗಳೂರು: ಆನ್‍ಲೈನ್ ಲಾಟರಿ ಲಕ್ಕಿ ಡ್ರಾ ಮೂಲಕ ಲಕ್ಷ ಲಕ್ಷ ಹಣ ಗಳಿಸಿದ್ದೀರಿ ಎಂದು ನಂಬಿಸಿ ವಂಚಿಸುತ್ತಿದ್ದ ಗ್ಯಾಂಗ್ ವೊಂದನ್ನು ಆಗ್ನೇಯ ವಿಭಾಗದ ಸಿಇಎನ್ ಪೊಲೀಸರು ಬಂಧಿಸಿದ್ದಾರೆ. ಸಾರ್ವಜನಿಕರಿಗೆ ನಕಲಿ ಲಾಟರಿ ಮತ್ತು ಲಕ್ಕಿ ಡ್ರಾ ಮೆಸೇಜ್ ಕಳಿಸುತ್ತಿದ್ದ ಅಸಾಮಿಗಳು ಬಳಿಕ ಅವರಿಂದ ಹಣ ಪಡೆದು ಟೋಪಿ ಹಾಕಿ ವಂಚಿಸುತ್ತಿದ್ದರು.

ನಗರದ ಆಗ್ನೇಯ ವಿಭಾಗದ ಸಿಇಎನ್ ಪೊಲೀಸರು ಬೆಳಗಾವಿ ಜಿಲ್ಲೆಯ ಅಪ್ಪಾಜಿ ಗಂಗಾರಾಂ, ಮಹಾಂತೇಶ್, ಸುರೇಶ್ ಮಲ್ಲಪ್ಪ ಎಂಬುವರನ್ನ ಬಂಧಿಸಿದ್ದಾರೆ. ಆರೋಪಿಗಳು ಹನುಮಂತರಾಯಪ್ಪ ಎಂಬುವವರಿಗೆ 35 ಲಕ್ಷ ಲಕ್ಕಿ ಡ್ರಾ ಬಂದಿದೆ ಎಂದು ಆನ್‍ಲೈನ್ ಮೂಲಕ ಮೆಸೇಜ್ ಮಾಡಿದ್ದಾರೆ. ಇದನ್ನ ನಂಬಿದ ಹನುಮಂತರಾಯಪ್ಪ ಆರೋಪಿಗಳ ಜೊತೆ ಆನ್‍ಲೈನ್ ಮೂಲಕ ಸಂಪರ್ಕ ಮಾಡಿ ಆರೋಪಿಗಳು ಕೇಳಿದ ಮಾಹಿತಿ ನೀಡಿದ್ದಾರೆ. ಈ ವೇಳೆ ಲಕ್ಕಿ ಡ್ರಾ ಹಣ ಪಡೆಯಲು ಪ್ರೊಸೆಸಿಂಗ್ ಚಾರ್ಜ್ ಎಂದು 75 ಸಾವಿರ ಹಣ ನೀಡಬೇಕು ಎಂದು ಆರೋಪಿಗಳು ತಿಳಿಸಿದ್ದಾರೆ. ಇದನ್ನ ನಂಬಿದ ದೂರುದಾರ ವಿವಿಧ ಬ್ಯಾಂಕ್ ಖಾತೆಗಳಿಗೆ 75 ಸಾವಿರ ಹಣ ಹಾಕಿದ್ದಾರೆ.

ಹಣ ಹಾಕಿಸಿಕೊಂಡ ಬಳಿಕ ಅಸಾಮಿಗಳು ಲಕ್ಕಿ ಡ್ರಾ ಹಣವು ಕೊಡದೇ, ಪ್ರೊಸೆಸಿಂಗ್ ಚಾರ್ಜ್ ಅಮೌಂಟ್ ಕೊಡದೇ ಯಾಮಾರಿಸಿದ್ದಾರೆ. ಆನ್‍ಲೈನ್ ವಂಚಕರ ಮೋಸದ ಬಲೆಗೆ ಬಿದ್ದ ಹನುಮಂತರಾಯಪ್ಪ ಈ ಬಗ್ಗೆ ಸಿಇಎನ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸದ್ಯ ಆರೋಪಿಗಳನ್ನ ಬಂಧಿಸಿದ ಆಗ್ನೇಯ ಸಿಇಎನ್ ಪೊಲೀಸರು ಈ ಹಿಂದಿನ ಕೃತ್ಯ ಮತ್ತು ಪೂರ್ವಾಪರಗಳ ಬಗ್ಗೆ ತನಿಖೆ ಕೈಗೊಂಡಿದ್ದಾರೆ.

NEWS DESK

TIMES OF BENGALURU