ಥಿಯೇಟರ್‌ಗಳಿಗೆ ಮಾತ್ರ ಶೇ.೫೦ರಷ್ಟು ನಿಯಮ ಯಾಕೆ?

ಬೆಂಗಳೂರು: ರಾಜ್ಯದಲ್ಲಿ ಹೆಚ್ಚು ಕೊರೊನಾ ಸೋಂಕು ಪತ್ತೆಯಾಗುತ್ತಿರುವ ಹಿನ್ನಲೆಯಲ್ಲಿ ಕಟ್ಟುನಿಟ್ಟಿನ ಕ್ರಮ ಜಾರಿಗೊಳಿಸಲು ಬಿಬಿಎಂಪಿ ಮುಂದಾಗಿದೆ. ಅದರಲ್ಲೂ ಚಿತ್ರಮಂದಿರಗಳಲ್ಲಿ ಶೇ.50ರಷ್ಟು ಜನರಿಗೆ ಮಾತ್ರ ಅವಕಾಶ ನೀಡಲು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಸರ್ಕಾರದ ಈ ನಿರ್ಧಾರಕ್ಕೆ ಇದೀಗ ಚಿತ್ರರಂಗ ಆಕ್ರೋಶ ವ್ಯಕ್ತಪಡಿಸಿದೆ.

ಥಿಯೇಟರ್ ಗಳಿಗೆ ಮಾತ್ರ ಶೇ. 50ರಷ್ಟು ಜನರಿಗೆ ಅವಕಾಶ ವಿಚಾರವಾಗಿ ಮಾತನಾಡಿರುವ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಚಿತ್ರರಂಗ ಈಗಷ್ಟೇ ಚೇತರಿಸಿಕೊಳ್ಳುತ್ತಿದೆ. ಒಂದು ಬಾರಿಯ ಕೊರೊನಾ ಲಾಕ್ ಡೌನ್‍ನಿಂದಾಗಿ ಇಡೀ ಸಿನಿರಂಗವೇ ಬಂದ್ ಆಗಿತ್ತು. ಮತ್ತೆ ಕೆಲಸಗಳು ಆರಂಭವಾಗುತ್ತಿವೆ ಹೀಗಿರುವಾಗ ಈಗ ಥಿಯೇಟರ್ ಗಳಿಗೆ ಶೇ.50ರಷ್ಟು ಅವಕಾಶ ನೀಡಿದರೆ ಸಿನಿಮಾದವರ ಬದುಕು ದುಸ್ಥರವಾಗುತ್ತದೆ. ಇಂಥಹ ನಿರ್ಧಾರವನ್ನು ಸರ್ಕಾರ ಕೈಬಿಡಬೇಕು ಎಂದು ಹೇಳಿದ್ದಾರೆ.

ಥಿಯೇಟರ್ ಗಳಿಗೆ ಶೇ.50ರಷ್ಟು ನಿಯಮ ಬೇಡ. ಶೇ100ರಷ್ಟು ಅವಕಾಶ ನೀಡಿ. ಅಭಿಮಾನಿಗಳು, ಪ್ರೇಕ್ಷಕರು ಕೋವಿಡ್ ನಿಯಮಗಳನ್ನು ಪಾಲಿಸಿ, ಮುಂಜಾಗೃತಾ ಕ್ರಮಗಳನ್ನು ಕೈಗೊಂಡು ಥಿಯೇಟರ್ ಗೆ ಬರಲಿ. ಥಿಯೇಟರ್ ಗಳಿಗೆ ಮಾತ್ರ ಶೇ.50ರಷ್ಟು ನಿಯಮ ಯಾಕೆ? ರಾಜಕೀಯ ರ‍್ಯಾಲಿ, ಸಭೆ-ಸಮಾರಂಭಗಳನ್ನೂ ಬಂದ್ ಮಾಡಲಿ. ಸರ್ಕಾರದ ಈ ನಿರ್ಧಾರದಿಂದ ಇಡೀ ಸಿನಿಮಾ ಕ್ಷೇತ್ರಕ್ಕೆ ತೊಂದರೆಯಾಗುತ್ತದೆ. ಸರ್ಕಾರ ಈ ನಿಯಮ ವಾಪಸ್ ಪಡೆಯಬೇಕು ಎಂದು ಮನವಿ ಮಾಡಿದ್ದಾರೆ.