ಚಿಟ್‍ಫಂಡ್ ಕಂಪನಿಯಿಂದ ಮೋಸ : ಮೂವರ ಬಂಧನ

ಬೆಂಗಳೂರು : 20 ವರ್ಷಗಳಿಂದ ಚಿಟ್ ಫಂಡ್ ನಡೆಸುತ್ತಿದ್ದ ತ್ರಿಮೂರ್ತಿಗಳನ್ನು ನಂಬಿ ನೂರಾರು ಜನ ಲಕ್ಷ ಲಕ್ಷ ಹೂಡಿಕೆ ಮಾಡಿದ್ದರು. ಸರ್ಕಾರಿ ನೌಕರರು, ನಿವೃತ್ತ ನೌಕರರು ಹಾಗೂ ಉದ್ಯಮಿಗಳನ್ನೇ ಟಾರ್ಗೆಟ್ ಮಾಡಿ ಕೋಟಿ ಕೋಟಿ ಲೂಟಿ ಮಾಡಿ ಪರಾರಿಯಾಗಿದ್ದವರನ್ನು ಬೆಂಗಳೂರಿನ ಸಿಇಎನ್ ಪೊಲೀಸರು ಬಂಧಿಸಿದ್ದಾರೆ. ಚಿಟ್ ಫಂಡ್ ವ್ಯವಹಾರ ನಡೆಸಿ ಗ್ರಾಹಕರಿಗೆ ಕೋಟಿ ಕೋಟಿ ಮೋಸ ಮಾಡಿ ನೆರೆ ರಾಜ್ಯ ಆಂಧ್ರಪ್ರದೇಶದಲ್ಲಿ ತಲೆಮರೆಸಿಕೊಂಡಿದ್ದ ಮೂವರು ಸಹೋದರರನ್ನು ಬೆಂಗಳೂರಿನ ಸೈಬರ್ ಅಪರಾಧ, ಆರ್ಥಿಕ ಅಪರಾಧ ಮತ್ತು ಮಾದಕವಸ್ತುಗಳು ವಿಭಾಗದ ಪೊಲೀಸರು ಬಂಧಿಸಿದ್ದಾರೆ.

ಮೂಲತಃ ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ವೆಂಕಟೇಶ್ ಬಾಬು, ಲೋಕೇಶ್ ಬಾಬು, ನಟರಾಜು ಕಳೆದ 20 ವರ್ಷದಿಂದ ಬೆಂಗಳೂರು ಉತ್ತರ ತಾಲೂಕಿನ ಶಿವನಪುರದಲ್ಲಿ ವಾಸಿಸುತ್ತಿದ್ದರು. ಆರಂಭದಲ್ಲಿ ಅಗರಬತ್ತಿ ವ್ಯಾಪಾರ ಮಾಡುತ್ತಿದ್ದರು. ಜನರ ವಿಶ್ವಾಸಗಳಿಸಿ ಸಣ್ಣ ಚೀಟಿ ವ್ಯವಹಾರ ಶುರು ಮಾಡಿದ ಇವರು ದೊಡ್ಡ ಚಿಟ್ ಫಂಡ್ ಉದ್ಯಮ ಪ್ರಾರಂಭಿಸಿ, ಸುಮಾರು 500 ಜನರಿಂದ ಹೂಡಿಕೆ ಮಾಡಿಸಿಕೊಂಡು ಸದ್ಯ 8 ಕೋಟಿಗೂ ಅಧಿಕ ಹಣವನ್ನು ಗುಳುಂ ಮಾಡಿ ಪರಾರಿಯಾಗಿರುವ ಆರೋಪ ಕೇಳಿ ಬಂದಿತ್ತು.

ಆರೋಪಿಗಳ ವಿರುದ್ದ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಅಪರಾದ ಸಂಖ್ಯೆ 0483/2020 ಯಲ್ಲಿ ಕರ್ನಾಟಕ ಪ್ರೊಟೆಕ್ಷನ್ ಆಫ್ ಇಂಟರೆಸ್ಟ್ ಡೆಪೊಸೀಟರ್ ಎಕ್ಸೋರ್ಬಿಟೆಂಟ್ ಆಕ್ಟ್ ಅಡಿಯಲ್ಲಿ ದೂರು ದಾಖಲಾಗಿತ್ತು. ಆರ್ಥಿಕ ಅಪರಾಧ ಆದ ಕಾರಣ ಮಾದನಾಯಕನಹಳ್ಳಿ ಪೊಲೀಸರು ಪ್ರಕರಣವನ್ನ ಬೆಂಗಳೂರಿನ  ಸಿಇಎನ್  ವಿಭಾಗಕ್ಕೆ ವರ್ಗಾವಣೆ ಮಾಡಿದ್ದರು. ಮೊಬೈಲ್ ಟವರ್ ಲೊಕೇಷನ್ ಆಧಾರದ ಮೇಲೆ ನೆರೆಯ ರಾಜ್ಯ ಆಂಧ್ರಪ್ರದೇಶದಲ್ಲಿ ಬಂಧಿಸಿದ್ದಾರೆ. ಸದ್ಯ ಆತಂಕದಲ್ಲಿದ್ದ ಹೂಡಿಕೆದಾರರಿಗೆ ಆರೋಪಿಗಳ ಬಂಧನದಿಂದ ನಿಟ್ಟುಸಿರು ಬಿಡುವಂತಾಗಿದ್ದು, ಪ್ರಕರಣದ ತನಿಖೆಯ ನಂತರ ಹೂಡಿಕೆದಾರರಿಗೆ ನ್ಯಾಯ ಸಿಗಬೇಕಿದೆ.

NEWS DESK

TIMES OF BENGALURU