ನಕಲಿ ಪೊಲೀಸ್ ಅಭ್ಯರ್ಥಿಗಳ ಬಂಧನ

ಬೆಂಗಳೂರು : ಪೊಲೀಸ್ ಇಲಾಖೆಯ ನೇಮಕಾತಿಯಲ್ಲಿ ಬೇರೆಯವರ ಹೆಸರಲ್ಲಿ ನಕಲಿ ದಾಖಲೆಗಳನ್ನು ನೀಡಿ ಪೊಲೀಸ್ ಇಲಾಖೆ ಸೇರಲು ಮುಂದಾದ ಮೂವರು ಅಭ್ಯರ್ಥಿಗಳು ಈಗ ಪೆÇಲೀಸರ ವಶದಲ್ಲಿದ್ದಾರೆ. ಬೆಂಗಳೂರಿನಲ್ಲಿ ಪೊಲೀಸರಿಗೇ ಮೋಸ ಮಾಡಿ, ಪೊಲೀಸ್ ಇಲಾಖೆಯಲ್ಲಿ ದೈಹಿಕ ಪರೀಕ್ಷೆ ಎದುರಿಸಲು ಮುಂದಾದ ಅಭ್ಯರ್ಥಿಗಳು ಖಾಕಿ ಇಲಾಖೆಯ ಕಣ್ಣಿಗೆ ಬಿದ್ದು, ಬಂಧನಕ್ಕೊಳಗಾಗಿದ್ದಾರೆ.

ಕೆಎಸ್‍ಆರ್‍ಪಿ ನೇಮಕಾತಿ ದೈಹಿಕ ಪರೀಕ್ಷೆಗೆ ನಕಲಿ ಅಭ್ಯರ್ಥಿಗಳು ಹಾಜರಾಗಿದ್ದರು. ಮಧ್ಯವರ್ತಿಗಳ ಮೂಲಕ ನಕಲಿ ಅಭ್ಯರ್ಥಿಗಳು ದೈಹಿಕ ಪರೀಕ್ಷೆಗೆ ಹಾಜರಾಗಿದ್ದರು. ದೈಹಿಕ ಪರೀಕ್ಷೆ ಮುಗಿಸಿ ಮೆಡಿಕಲ್ ಟೆಸ್ಟ್ ವೇಳೆ ಮೂವರು ಅಭ್ಯರ್ಥಿಗಳು ಸಿಕ್ಕಿ ಬಿದ್ದಿದ್ದಾರೆ. ಜಗದೀಶ್ ದೊಡ್ಡಗೌಡರ್ ಪರವಾಗಿ ದೈಹಿಕ ಪರೀಕ್ಷೆಗೆ ಹಾಜರಾಗಿದ್ದ ಪ್ರಕಾಶ್ ಆಡಿನ್, ಮಲ್ಲಯ್ಯ ಪೂಜಾರಿ ಪರವಾಗಿ ಸೈಯಾದ್ ಚಿಮ್ಮಡ್ ದೈಹಿಕ ಪರೀಕ್ಷೆಗೆ ಹಾಜರಾಗಿದ್ದರು. ನಾಗಪ್ಪನವರ ಪರವಾಗಿ ಮಲ್ಲಿಕಾರ್ಜುನ ದೈಹಿಕ ಪರೀಕ್ಷೆಗೆ ಹಾಜರಾಗಿದ್ದರು.

ಬಳಿಕ ವೈದ್ಯಕೀಯ ಮತ್ತು ಅಂಕಪಟ್ಟಿ ಪರಿಶೀಲನೆ ವೇಳೆ ಈ ಮೂವರು ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಈ ಬಗ್ಗೆ ಮೂವರು ಅಭ್ಯರ್ಥಿಗಳು, ಮೂವರು ನಕಲಿ ಅಭ್ಯರ್ಥಿಗಳು ಹಾಗೂ ಮಧ್ಯವರ್ತಿಗಳ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ. ಮಡಿವಾಳ ಮತ್ತು ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಮೂವರು ಅಭ್ಯರ್ಥಿಗಳನ್ನು ಬಂಧಿಸಲಾಗಿದೆ.

NEWS DESK

TIMES OF BENGALURU