ಜೀವ ಬೆದರಿಕೆ ಪತ್ರ: ಬರೆದವರ ವಿರುದ್ಧ ಕಠಿಣ ಕ್ರಮ

ಬೆಂಗಳೂರು: ಮಾಜಿ ಸಚಿವರಾದ ಬಿ.ಟಿ ಲಲಿತಾ ನಾಯಕ್ ಅವರೂ ಸೇರಿದಂತೆ ರಾಜ್ಯದ ಮೂವರು ಗಣ್ಯರಿಗೆ ಬೆದರಿಕೆ ಪತ್ರದ ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಆ ಬೆದರಿಕೆ ಪತ್ರ ಬರೆದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಗೃಹ ಸಚಿವರು, ಲಲಿತಾ ನಾಯಕ್ ಅವರು ಹಿರಿಯ ಸಾಹಿತಿ, ಗೌರವಾನ್ವಿತ ವ್ಯಕ್ತಿ. ಅವರು ಬೆದರಿಕೆ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟಿದ್ದಾರೆ. ಈ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸುತ್ತಿದೆ. ಇದರ ಹಿಂದೆ ಯಾರೇ ಇದ್ದರೂ, ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಸಚಿವ ಬೊಮ್ಮಾಯಿ ಭರವಸೆ ನೀಡಿದ್ದಾರೆ.

ಭಾನುವಾರ ನಡೆದಿದ್ದ ಮಾಜಿ ಸಚಿವ ಎಚ್.ಎಂ. ರೇವಣ್ಣ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಮಾಜಿ ಸಚಿವೆ ಬಿ.ಟಿ. ಲಲಿತಾ ನಾಯಕ್ ಅವರು, ಮೇ. 1ರಂದು ಪ್ರಮುಖರನ್ನು ಕೊಲೆ ಮಾಡುತ್ತೇವೆ ಎಂಬ ಪತ್ರ ನನಗೆ ಬಂದಿದೆ. ಪತ್ರದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಶಾಸಕ ಸಿ.ಟಿ. ರವಿ, ಟಿವಿ ಸಂಪಾದಕ ರಂಗಣ್ಣ, ನಟ ಶಿವರಾಜ್ ಕುಮಾರ್ ಹಾಗೂ ತಮ್ಮನ್ನು ಕೊಲೆ ಮಡುವ ಪತ್ರ ಬಂದಿದೆ. ಅದನ್ನು ಪೊಲೀಸರಿಗೆ ಒಪ್ಪಿಸಿದ್ದು, ಅವರು ಪರಿಶೀಲನೆ ಮಾಡುತ್ತಿದ್ದಾರೆ. ಆದರೆ ನಾನು ಹೆದರುವ ಪ್ರಶ್ನೆಯೇ ಇಲ್ಲ. ಸಿ.ಟಿ ರವಿ ಅವರನ್ನು ಕೊಲೆ ಮಾಡಿದರೆ, ನಾನು ಉಳಿಯುತ್ತೇನೆ. ನನ್ನನ್ನು ಕೊಲೆ ಮಾಡಿದರೆ ಸಿ.ಟಿ. ರವಿ ಅವರು ಉಳಿಯುತ್ತಾರೆ. ಕೊಲೆ ಮಾಡುವುದಾದರೆ ಎಲ್ಲಿ ಬೇಕದರೂ ಮಾಡಬಹುದು. ಹೀಗಾಗಿ ನಾನು ಹೆದರದೆ ಅಭಿನಂದನಾ ಸಮಾರಂಭದಲ್ಲಿ ಭಾಗಿಯಗಿದ್ದೇನೆ ಎಂದು ಸ್ಫೋಟಕ ಹೇಳಿಕೆ ನೀಡಿದ್ದರು.

NEWS DESK
TIMES OF BENGALURU