ಬೆಂಗಳೂರು: ಹಗಲಿನಲ್ಲಿ ಮನೆಗಳನ್ನು ಗುರುತಿಸಿ, ರಾತ್ರಿ ವೇಳೆ ಮನೆಗೆ ಹೋಗಿ ಬೀಗ ಮುರಿದು ಕಳ್ಳತನ ಎಸಗುತ್ತಿದ್ದ ಆರೋಪಿ ಶ್ರೀನಿವಾಸ್ ಅಲಿಯಾಸ್ ಡೊಳ್ಳ ಸೀನನನ್ನು (42) ರಾಜಾಜಿನಗರ ಪೊಲೀಸರು ಬಂಧಿಸಿದ್ದಾರೆ. ತನ್ನ 17ನೇ ವಯಸ್ಸಿನಿಂದಲೇ ಕಳ್ಳತನ ಎಸಗುತ್ತಿರುವ ಆರೋಪಿ, ಅಪರಾಧ ಹಿನ್ನೆಲೆಯುಳ್ಳವ. ಪೀಣ್ಯ, ರಾಜಗೋಪಾಲನಗರ, ಆರ್ಎಂಸಿ ವಾರ್ಡ್, ನಂದಿನಿ ಲೇಔಟ್, ಬ್ಯಾಡರಹಳ್ಳಿ, ತುಮಕೂರು, ಚಿತ್ರದುರ್ಗ ಸೇರಿದಂತೆ ಹಲವು ಠಾಣೆ ವ್ಯಾಪ್ತಿಯಲ್ಲಿ ಆರೋಪಿ ಕಳ್ಳತನ ಎಸಗಿದ್ದ.
ಜೈಲಿಗೂ ಹೋಗಿ ಜಾಮೀನು ಮೇಲೆ ಹೊರಬಂದಿದ್ದ ಆಗ, ಪುನಃ ಕೃತ್ಯ ಎಸಗಲಾರಂಭಿಸಿದ್ದ. ಪೀಣ್ಯ ನಿವಾಸಿ ಶ್ರೀನಿವಾಸ್, ನಗರ ಹಾಗೂ ಹೊರ ಜಿಲ್ಲೆಗಳಲ್ಲಿ 50ಕ್ಕೂ ಹೆಚ್ಚು ಕಡೆ ಕಳ್ಳತನ ಎಸಗಿದ್ದ. ಆತನಿಂದ 6 ಲಕ್ಷ ಮೌಲ್ಯ ಚಿನ್ನಾಭರಣ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು. ಜಾಲಹಳ್ಳಿ ಕ್ರಾಸ್ ಬಳಿ ಆರೋಪಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ. ಗಸ್ತಿನಲ್ಲಿದ್ದ ಸಿಬ್ಬಂದಿ ಆತನನ್ನು ವಶಕ್ಕೆ ಪಡೆದು ಠಾಣೆಗೆ ಕರೆತಂದು ವಿಚಾರಣೆ ನಡೆಸಿದಾಗಲೇ ತಪ್ಪೊಪ್ಪಿಕೊಂಡ ಎಂದು ತಿಳಿಸಿದರು.
NEWS DESK
TIMES OF BENGALURU