ಗಡಿ ಭಾಗಗಳಲ್ಲಿ ಕಟ್ಟೆಚ್ಚರ ವಹಿಸದ ಬಿಬಿಎಂಪಿ..?

ಬೆಂಗಳೂರು : ತಮಿಳುನಾಡು-ಕರ್ನಾಟಕ ಗಡಿ ಭಾಗಗಳಲ್ಲಿ ಕಟ್ಟೆಚ್ಚರ ವಹಿಸದ ಹಿನ್ನೆಲೆಯಲ್ಲಿ ಕೊರೊನಾ ಪ್ರಕರಣಗಳು ಉಲ್ಬಣಗೊಳ್ಳುವ ಆತಂಕ ಎದುರಾಗಿದೆ. ಕೊರೊನಾ ನಿಯಂತ್ರಣಕ್ಕಾಗಿ ತಮಿಳುನಾಡಿನಲ್ಲಿ ಈಗಾಗಲೇ ಶಾಲಾ-ಕಾಲೇಜುಗಳನ್ನು ಬಂದ್ ಮಾಡಲಾಗಿದೆ. ಹಲವು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಆದರೆ, ನಮ್ಮ ಗಡಿ ಭಾಗದಲ್ಲಿ ಕಟ್ಟೆಚ್ಚರ ವಹಿಸುವಲ್ಲಿ ನಿರ್ಲಕ್ಷ್ಯ ತೋರಿದ್ದು, ಕೊರೊನಾ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆ ಇದೆ.

ಬೆಂಗಳೂರು ನಗರದಲ್ಲಿ ಶೇ.15ರಷ್ಟು ತಮಿಳು ಬಾಂಧವರಿದ್ದು, ಚುನಾವಣಾ ಪ್ರಚಾರ ಕಾರ್ಯ ಸೇರಿದಂತೆ ಇನ್ನಿತರ ಕಾರ್ಯಗಳಿಗೆ ಅಲ್ಲಿಗೆ ಹೋಗಿ ಬರುವವರು ಹೆಚ್ಚಾಗಿದ್ದಾರೆ. ಪ್ರತಿದಿನ ಸಾವಿರಾರು ಸಂಖ್ಯೆಯಲ್ಲಿ ತಮಿಳುನಾಡಿನಿಂದ ಬೆಂಗಳೂರು ಮತ್ತಿತರೆಡೆ, ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಜನ ಪ್ರಯಾಣ ಮಾಡುತ್ತಾರೆ. ಕೊರೊನಾ ಸೋಂಕು ಉಲ್ಬಣವಾಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಅತ್ತಿಬೆಲೆ ಚೆಕ್ ಪೋಸ್ಟ್ ಸೇರಿದಂತೆ ಗಡಿ ಭಾಗಗಳಲ್ಲಿ ಹೇಳುವವರು, ಕೇಳುವವರು ಯಾರೂ ಇಲ್ಲದಂತಾಗಿದೆ. ಕೊರೊನಾ ನಿಯಂತ್ರಿಸಬೇಕಾದರೆ ಗಡಿ ಭಾಗದಲ್ಲಿ ಕಟ್ಟೆಚ್ಚರ ವಹಿಸಬೇಕು. ಸೂಕ್ತ ತಪಾಸಣೆ ನಡೆಸಬೇಕು. ಆದರೆ, ಬಿಬಿಎಂಪಿ ಆರೋಗ್ಯ ಇಲಾಖೆ ಸಂಪೂರ್ಣ ನಿರ್ಲಕ್ಷ್ಯ ವಹಿಸಿದೆ. ಮುಂದಿನ ದಿನಗಳಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗಿ ಆತಂಕದ ದಿನಗಳು ಮರುಕಳಿಸಿದರೂ ಆಶ್ಚರ್ಯವಿಲ್ಲ.

NEWS DESK

TIMES OF BENGALURU