ಹಣ್ಣಿನ ದರದಲ್ಲಿ ದಿಢೀರ್ ಏರಿಕೆ

ಬೆಂಗಳೂರು: ಬೇಸಿಗೆ ಆರಂಭಗೊಂಡಿರುವುದರಿಂದ ಒಂದು ವಾರದಿಂದ ಹಣ್ಣಿನ ದರಗಳು ದಿಢೀರ್ ಏರಿಕೆ ಕಂಡಿವೆ. ಇನ್ನೊಂದು ವಾರದಲ್ಲಿ ಹಣ್ಣಿನ ದರಗಳು ಇನ್ನಷ್ಟು ಹೆಚ್ಚಾಗುವ ನಿರೀಕ್ಷೆ ಇದೆ ಎನ್ನುತ್ತಾರೆ ವ್ಯಾಪಾರಿಗಳು. ಇನ್ನು ಬೇಸಿಗೆಯಲ್ಲಿ ಜನರು ಹಣ್ಣುಗಳನ್ನು ಹೆಚ್ಚು ಸೇವಿಸುತ್ತಾರೆ. ಹಣ್ಣಿನ ನೇರ ಸೇವನೆಗಿಂತ ಹಣ್ಣುಗಳಿಂದ ತಯಾರಿಸುವ ಪಾನೀಯ ಸೇವನೆಗೆ ಮಳಿಗೆಗಳ ಎದುರು ಜನರ ದಂಡೇ ಸೇರಿರುತ್ತದೆ.

ಮಧ್ಯಾಹ್ನದ ಸುಡುಬಿಸಿಲಿಗೆ ಆಹಾರದ ಬದಲು ಹಣ್ಣಿನ ಸಲಾಡ್ ಸವಿಯುವವರೂ ಹೆಚ್ಚು. ಇದರಿಂದ ಬೇಸಿಗೆ ಬಂತೆಂದರೆ ಹಣ್ಣಿನ ವ್ಯಾಪಾರ ಗರಿಗೆದರುತ್ತದೆ. ಬೇಸಿಗೆ ಇರುವ ಸುಮಾರು ನಾಲ್ಕು ತಿಂಗಳವರೆಗೆ ಹಣ್ಣುಗಳಿಗೆ ಬೇಡಿಕೆ ಇರುತ್ತದೆ. ಹಬ್ಬಗಳನ್ನು ಹೊರತುಪಡಿಸಿದರೆ, ಹಣ್ಣುಗಳಿಗೆ ಬೇಡಿಕೆ ಬರುವುದು ಬೇಸಿಗೆಯಲ್ಲಿ ಮಾತ್ರ. ಹಾಗಾಗಿ, ವರ್ಷದಲ್ಲಿ ಹಣ್ಣಿನ ವ್ಯಾಪಾರಕ್ಕೆ ಬೇಸಿಗೆ ಸೂಕ್ತಕಾಲ ಎಂದು ಸಿಂಗೇನ ಅಗ್ರಹಾರದ ಎಪಿಎಂಸಿ ಮಾರುಕಟ್ಟೆಯ ಹಣ್ಣಿನ ಸಗಟು ವರ್ತಕ ಸೈಯದ್ ಖಾಜಿಂ ತಿಳಿಸಿದರು.

NEWS DESK

TIMES OF BENGALURU