ಸುಬ್ರಮಣ್ಯ ರೆಡ್ಡಿ ಆಸ್ತಿ ಇ.ಡಿ. ವಶಕ್ಕೆ

ಬೆಂಗಳೂರು : ಬ್ಯಾಂಕ್ ಆಫ್ ಬರೋಡಾದಲ್ಲಿ ನಕಲಿ ಆಭರಣಗಳನ್ನು ಅಡವಿಟ್ಟು ವಂಚಿಸುತ್ತಿದ್ದ ವ್ಯಕ್ತಿಯ ಸ್ಥಿರಾಸ್ತಿ ಇ.ಡಿ. ವಶಕ್ಕೆ ಪಡೆದಿದೆ. ಕೆಂಗೇರಿ ಶಾಖೆಯಲ್ಲಿ 12 ಕೋಟಿ ಮೊತ್ತದ ಚಿನ್ನಾಭರಣದ ಸಾಲಗಳನ್ನು ಪಡೆದು ವಂಚಿಸಿದ್ದ ಆರೋಪಿಯಿಂದ 4.83 ಕೋಟಿ ಮೌಲ್ಯದ ಆಸ್ತಿ ಇ.ಡಿ ವಶಕ್ಕೆ ಪಡೆದಿದೆ. ಎಸ್.ಕೆ.ಸುಬ್ರಮಣ್ಯ ರೆಡ್ಡಿ ಎಂಬುವವರು ಬ್ಯಾಂಕ್ ಆಫ್ ಬರೋಡಾದ ಕೆಂಗೇರಿ ಶಾಖೆಯ ವ್ಯವಸ್ಥಾಪಕ ಟಿ.ಎಲ್.ಪ್ರವೀಣ್ ಕುಮಾರ್ ನೆರವಿನಲ್ಲಿ 57 ವ್ಯಕ್ತಿಗಳ ಹೆಸರಿನಲ್ಲಿ ನಕಲಿ ಆಭರಣ ಅಡವಿಟ್ಟು ಚಿನ್ನಾಭರನದ ಸಾಲ ಪಡೆದಿದ್ದರು.

ಈ ಹಣವನ್ನು ಸಿಂಡಿಕೇಟ್ ಬ್ಯಾಂಕ್‍ನಲ್ಲಿದ್ದ ತಮ್ಮ ಸಾಲ ತೀರಿಸಲು, ಹೊಸ ಆಸ್ತಿ ಖರೀದಿಗೆ ಬಳಸಿದ್ದರು ಎಂದು ಸಿಬಿಐ ನ್ಯಾಯಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. ಆದರೆ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‍ಎ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಇ.ಡಿ ತನಿಖೆ ನಡೆಸಿತ್ತು. ಈ ತನಿಖೆಯಲ್ಲಿ ಸುಬ್ರಮಣ್ಯ ರೆಡ್ಡಿಗೆ ಸೇರಿದ 4.83 ಕೋಟಿ ಮೌಲ್ಯದ ಐದು ಸ್ಥಿರಾಸ್ತಿಗಳನ್ನು ಇ.ಡಿ ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದೆ.

NEWS DESK
TIMES OF BENGALURU