ನಾಳೆ ಕೃಷಿ ಕಾಯ್ದೆಗಳ ಶವಯಾತ್ರೆ

ಬೆಂಗಳೂರು:  ಕೇಂದ್ರದ ಕೃಷಿ ಕಾಯ್ದೆಯನ್ನು ವಿರೋಧಿಸಿ ನಾಳೆ ಭಾರತ್ ಬಂದ್‍ಗೆ ಕರೆ ಕೊಟ್ಟಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ವಿವಿಧೆಡೆ ಪ್ರತಿಭಟನೆ ಹಾಗೂ ಕೃಷಿ ಕಾಯ್ದೆಗಳ ಶವಯಾತ್ರೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕೇಂದ್ರದ ಕೃಷಿ ವಿನಾಶ ಕಾಯ್ದೆ, ರೈತರ ಮರಣ ಶಾಸನ ವಿರೋಧಿಸಿ ರಾಜ್ಯದ ಎಲ್ಲಾ ನಗರಗಳ ಜಿಲ್ಲಾ ಕೇಂದ್ರಗಳಲ್ಲಿ ಕೃಷಿ ಕಾಯ್ದೆಗಳ ಶವಯಾತ್ರೆ ಹಾಗೂ ಪ್ರತಿಭಟನೆ ನಡೆಸಲಾಗುವುದು ಎಂದು ರೈತ ಮುಖಂಡರು ತಿಳಿಸಿದ್ದಾರೆ.

ನಾಳೆ ಬೆಂಗಳೂರಿನಲ್ಲಿ ಟೌನ್‍ಹಾಲ್‍ನಿಂದ ಮೈಸೂರ್ ಬ್ಯಾಂಕ್ ವೃತ್ತದವರೆಗೆ ಕೃಷಿ ಕಾಯ್ದೆಗಳ ಶವಯಾತ್ರೆ ನಡೆಯಲಿದ್ದು, ನಾಯಂಡಹಳ್ಳಿ ಸುತ್ತಮುತ್ತ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಐಕ್ಯ ಹೋರಾಟ ಸಮಿತಿ ಅಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದ್ದಾರೆ. ದೇಶಾದ್ಯಂತ ರೈತರು ನಡೆಸುತ್ತಿರುವ ಪ್ರತಿಭಟನೆ ನಾಳೆಗೆ ನಾಲ್ಕು ತಿಂಗಳು ಪೂರೈಸಲಿದ್ದು, ಇದರ ಅಂಗವಾಗಿ ರಾಷ್ಟ್ರೀಯ ಸಂಯುಕ್ತ ಕಿಸಾನ್ ಮೋರ್ಚ ಭಾರತ್ ಬಂದ್‍ಗೆ ಕರೆ ನೀಡಿದೆ.

ಈ ಕರೆಯನ್ನು ರಾಜ್ಯದ ರೈತರು ಕೂಡ ಬೆಂಬಲಿಸಿದ್ದು, ಇದರ ಅಂಗವಾಗಿ ಶವಯಾತ್ರೆ, ಪ್ರತಿಭಟನೆ ನಡೆಸಲಿದ್ದೇವೆ ಎಂದು ಹೇಳಿದರು. ಕೇಂದ್ರದ ಕೃಷಿ ಕಾಯ್ದೆಗಳು ರೈತರಿಗೆ ಮರಣ ಶಾಸನವಾಗಿದೆ. ಅವುಗಳನ್ನು ಹಿಂಪಡೆಯುವವರೆಗೆ ನಮ್ಮ ಹೋರಾಟ ನಿರಂತರವಾಗಿರುತ್ತದೆ. ರಾಷ್ಟ್ರೀಯ ಕಿಸಾನ್ ಮಹಾಪಂಚಾಯತ್‍ನ ರಾಷ್ಟ್ರೀಯ ರೈತ ಮುಖಂಡ ರಾಕೇಶ್ ಟಿಕಾಯಿತ್ ಅವರು ಬೇಡಿಕೆ ಈಡೇರಿಕೆವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂದು ಹೇಳಿದ್ದಾರೆ.

NEWS DESK

TIMES OF BENGALURU