ನಾಳೆ ಬಿಬಿಎಂಪಿಯಿಂದ ಬಜೆಟ್ ಮಂಡನೆ..?

ಬೆಂಗಳೂರು : ಬಿಬಿಎಂಪಿಯ 2021- 2022ನೆ ಸಾಲಿನ ಬಜೆಟ್ ಮಂಡನೆಗೆ ಎಲ್ಲ ರೀತಿಯ ಸಿದ್ಧತೆ ನಡೆಸುತ್ತಿದೆ. ಮಾ.26 (ನಾಳೆ) ಅಥವಾ 29ಕ್ಕೆ ಬಜೆಟ್ ಮಂಡನೆ ಯಾಗುವ ಸಾಧ್ಯತೆ ಇದೆ. ಪಾಲಿಕೆ ಆಡಳಿತಾಧಿಕಾರಿ ಆಡಳಿತ ನಡೆಸುತ್ತಿದ್ದು, ಈ ಬಾರಿ ಯಾವ ರೀತಿ ಬಜೆಟ್ ಮಂಡನೆಯಾಗಲಿದೆ ಎಂಬ ಕುತೂಹಲವಿದೆ. ಆರ್ಥಿಕ ವರ್ಷ ಪ್ರಾರಂಭವಾಗುವುದಕ್ಕೂ ಮುನ್ನ ಅಂದರೆ ಮಾ.31ರ ಗಡುವಿನೊಳಗೆ ಬಜೆಟ್ ಮಂಡನೆ ಮಾಡಬೇಕಾಗಿದ್ದು, ನಾಳೆ ತಪ್ಪಿದರೆ ಮಾ.29ರಂದು ಬಜೆಟ್ ಮಂಡನೆಯಾಗುವ ಸಾಧ್ಯತೆ ಇದೆ.

ಸಾಮಾನ್ಯವಾಗಿ ಪಾಲಿಕೆಯ ಕೌನ್ಸಿಲ್ ಸಭೆಯಲ್ಲಿ ಬಜೆಟ್ ಮಂಡನೆಯಾಗುತ್ತಿತ್ತು. ಆದರೆ, ಈ ಬಾರಿ ಪುಟ್ಟಣ್ಣಚೆಟ್ಟಿ ಪುರಭವನದಲ್ಲಿ 2021-22ನೆ ಸಾಲಿನ ಬಜೆಟ್ ಮಂಡನೆ ಆಗುವ ನಿರೀಕ್ಷೆ ಇದೆ ಎಂದು ಬಿಬಿಎಂಪಿ ಮೂಲಗಳಿಂದ ತಿಳಿದುಬಂದಿದೆ. ಚುನಾಯಿತ ಪ್ರತಿನಿಧಿಗಳ ಅವಧಿಯಲ್ಲಿ ಪಾಲಿಕೆಯ ಆರ್ಥಿಕ ಸಂಪನ್ಮೂಲಕ್ಕಿಂತ ಹೆಚ್ಚು ಬಜೆಟ್ ಮಂಡನೆ ಮಾಡಿದ್ದ ಹಿನ್ನೆಲೆಯಲ್ಲಿ ಸಾಕಷ್ಟು ಆರ್ಥಿಕ ಹೊರೆಯಾಗಿತ್ತು. ಇದನ್ನು ತಪ್ಪಿಸುವ ಉದ್ದೇಶದಿಂದ ಈ ಬಾರಿ 6500 ದಿಂದ 7500 ಕೋಟಿ ರೂ. ಬಜೆಟ್ ಮಂಡನೆಯಾಗುವ ಸಾಧ್ಯತೆ ಇದೆ. ಈ ಬಾರಿಯ ಬಜೆಟ್‍ನಲ್ಲಿ ಪಾಲಿಕೆಯ ಆರ್ಥಿಕ ಶಿಸ್ತು ಕಾಪಾಡಿಕೊಳ್ಳುವ ಅಂಶವನ್ನು ಸೇರಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

NEWS DESK

TIMES OF BENGALURU