ಮನೆ ಮನೆ ಪ್ರಚಾರಕ್ಕೆ ಐದು ಮಂದಿಗಷ್ಟೇ ಅವಕಾಶ

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಮಹಾಮಾರಿ ಹೆಚ್ಚಾಗಿದೆ. ಈ ನಡುವೆ ಏ.17 ರಂದು ನಡೆಯುವ ಬೆಳಗಾವಿ ಲೋಕಸಭೆ, ಮಸ್ಕಿ ಮತ್ತು ಬಸವಕಲ್ಯಾಣ ವಿಧಾನಸಭಾ ಉಪಚುನಾವಣೆಗೆ ಸರ್ಕಾರ ಕೊರೋನಾ ಮಾರ್ಗಸೂಚಿಯನ್ನು ಪ್ರಕಟಿಸಿದ್ದು, ಮನೆ ಮನೆ ಪ್ರಚಾರಕ್ಕೆ ಕೇವಲ ಐದು ಮಂದಿಗಷ್ಟೇ ಅವಕಾಶ ನೀಡಿದೆ.

ಕೊರೋನಾ ಪ್ರಕರಣಗಳು ಏರಿಕೆಯಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗದೊಂದಿಗೆ ಚರ್ಚಿಸಿ ಆರೋಗ್ಯ ಇಲಾಖೆಯು ಕೊರೋನಾ ಮಾರ್ಗಸೂಚಿಯನ್ನು ಪ್ರಕಟಿಸಿದೆ. ಚುನಾವಣಾ ಪ್ರಕ್ರಿಯೆಯಲ್ಲಿ ಭಾಗಿಯಾಗುವ ಪ್ರತಿಯೊಬ್ಬರೂ ಮಾಸ್ಕ್, ಸಾಮಾಜಿಕ ಅಂತರ ಪಾಲನೆ ಮಾಡಬೇಕು. ಸಿಬ್ಬಂದಿ ಮತ್ತು ಮತದಾರರ ಥರ್ಮಲ್ ಸ್ಕ್ಯಾನಿಂಗ್ ನಡೆಸಬೇಕು ಎಂದು ಸೂಚಿಸಲಾಗಿದೆ.

ನಾಮಪತ್ರ ಸಲ್ಲಿಸುವಾಗ ಅಭ್ಯರ್ಥಿ ಸೇರಿದಂತೆ ಇಬ್ಬರು ಇರಬೇಕು ಮತ್ತು ಎರಡು ವಾಹನಗಳಿಗೆ ಅನುಮತಿಯನ್ನು ನೀಡಲಾಗಿದೆ. ಉಳಿದಂತೆ ನಾಮಪತ್ರದ ಫಾರಂ ಡೌನ್ ಲೋಡ್, ಅಫಿಡವಿಟ್, ಭದ್ರತಾ ಠೇವಣಿ ಮುಂತಾದವನ್ನು ಆನ್‍ಲೈನ್ ಮೂಲಕವೇ ಸಲ್ಲಿಸಬಹುದಾಗಿದೆ. ಕೋವಿಡ್ ಪೀಡಿತರು, ಲಕ್ಷಣ ಇದ್ದವರು, ಕಂಟೈನ್ಮೆಂಟ್ ವಲಯದವರು, ಹೋಮ್ ಐಸೋಲೇಷನ್‍ನಲ್ಲಿದ್ದವರಿಗೆ ಅವಕಾಶ ನೀಡಬೇಕು. ಕೋವಿಡ್ ರೋಗಿಗಳು ಪಿಪಿಇ ಕಿಟ್ ಧರಿಸಿ ನಿಗದಿತ ಆಯಂಬುಲೆನ್ಸ್ ನಲ್ಲಿ ಬಂದು ಮತದಾನ ಮಾಡಬೇಕು ಎಂಬ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.

NEWS DESK

TIMES OF BENGALURU