ಸಾರ್ವಜನಿಕರು ಹೆಚ್ಚು ಎಚ್ಚರವಹಿಸಬೇಕು

ಬೆಂಗಳೂರು : ದೇಶದ ಎಲ್ಲ ರಾಜ್ಯಗಳಲ್ಲಿ ಕೋವಿಡ್ ಪ್ರಕರಣ ಹೆಚ್ಚುತ್ತಿದ್ದು, 2ನೇ ಅಲೆ ಆರಂಭವಾಗಿರುವುದು ಕಂಡುಬಂದಿದೆ. ಆದ್ದರಿಂದ ಸಾರ್ವಜನಿಕರು ಹೆಚ್ಚು ಎಚ್ಚರ ವಹಿಸಬೇಕು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ಮನವಿ ಮಾಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ದೇಶದ 8-10 ರಾಜ್ಯಗಳಲ್ಲಿ ಅತಿ ಹೆಚ್ಚು ಸಕ್ರಿಯ ಕೋವಿಡ್ ಪ್ರಕರಣಗಳಿವೆ. ಮಹಾರಾಷ್ಟ್ರದಲ್ಲಿ 2.82 ಲಕ್ಷ, ಕೇರಳದಲ್ಲಿ 24 ಸಾವಿರ, ಪಂಜಾಬ್ ನಲ್ಲಿ 22 ಸಾವಿರ, ಕರ್ನಾಟಕದಲ್ಲಿ 19 ಸಾವಿರ ಸಕ್ರಿಯ ಪ್ರಕರಣಗಳಿವೆ. ಎಲ್ಲ ರಾಜ್ಯಗಳಲ್ಲಿ ಕೋವಿಡ್ ಅಲೆ ಆರಂಭವಾಗಿದೆ ಎಂಬುದು ಸ್ಪಷ್ಟವಾಗಿದೆ. ಆದ್ದರಿಂದ ನಮ್ಮ ಚಟುವಟಿಕೆಗಳಲ್ಲಿ ನಿಯಂತ್ರಣ ಮಾಡದಿದ್ದರೆ ಅಪಾಯ ತಪ್ಪಿದ್ದಲ್ಲ ಎಂದರು.

ಜನರು ಕಡ್ಡಾಯವಾಗಿ ಮಾಸ್ಕ್ ಧರಿಸುವ, ಭೌತಿಕ ಅಂತರ ಕಾಯ್ದುಕೊಳ್ಳುವ ನಿಯಮ ಪಾಲಿಸಬೇಕು. ಎಲ್ಲರೂ ಲಸಿಕೆಯನ್ನು ಪಡೆಯಬೇಕು. ರಾಜ್ಯದಲ್ಲೀಗ ಪಾಸಿಟಿವಿಟಿ ದರ 1.6% ಆಗಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಈಗ ಒಂದು ಲಕ್ಷಕ್ಕೂ ಹೆಚ್ಚು ಜನರಿಗೆ ಪ್ರತಿ ದಿನ ಪರೀಕ್ಷೆ ಮಾಡಲಾಗುತ್ತಿದೆ. ರಾಷ್ಟ್ರೀಯ ಸರಾಸರಿ ಪಾಸಿಟಿವಿಟಿ ದರ 1.5% ಇದ್ದು, ನಮ್ಮ ರಾಜ್ಯದ ಪಾಸಿಟಿವಿಟಿ ದರ ಹೆಚ್ಚಿದೆ. ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಸೂಚಿಸಿದರು.

NEWS DESK

TIMES OF BENGALURU