ಬಸ್‍ಗಳಿಗೆ ಬಿಎಂಟಿಸಿ ಟೆಂಡರ್ ಆಹ್ವಾನ

ಬೆಂಗಳೂರು: ಮಹಾನಗರ ಸಾರಿಗೆ ಸಂಸ್ಥೆ ಸದ್ದಿಲ್ಲದೆ ಗುತ್ತಿಗೆ ಆಧಾರದಲ್ಲಿ 1500 ಡೀಸೆಲ್ ಬಸ್ ಪಡೆಯಲು ಟೆಂಡರ್ ಆಹ್ವಾನಿಸಿದೆ. ಹಲವು ವರ್ಷಗಳ ಹಿಂದೆ ಖಾಸಗಿಯವರಿಂದ ಗುತ್ತಿಗೆಯಲ್ಲಿ ಒಂದು ಸಾವಿರ ಬಸ್ ಪಡೆದು ಕಾರ್ಯಾಚರಣೆ ಮಾಡುವ ಪ್ರಯೋಗ ನಡೆದಿತ್ತು. ಈ ಮಾದರಿ ಬಿಎಂಟಿಸಿ ನಿಗಮ ಹಾಗೂ ಖಾಸಗಿ ಸಂಸ್ಥೆಗಳಿಗೆ ಹೆಚ್ಚಿನ ಲಾಭ ನೀಡದ ಹಿನ್ನಲೆಯಲ್ಲಿ ರದ್ದುಗೊಳಿಸಲಾಗಿತ್ತು. ಇದೀಗ ಮತ್ತೆ ಖಾಸಗಿಯವರಿಂದ ಬಸ್ ಪಡೆದು ಕಾರ್ಯಾಚರಣೆಯ ಸಾಹಸಕ್ಕೆ ಬಿಎಂಟಿಸಿ ಮುಂದಾಗಿದೆ.

ಈಗಾಗಲೇ ಕೇಂದ್ರದ ಫೇಮ್ ಯೋಜನೆಯ ಎರಡನೇ ಹಂತದಲ್ಲಿ ಅನುದಾನ ಬಳಸಿಕೊಂಡು ಗುತ್ತಿಗೆ ಮಾದರಿಯಲ್ಲಿ 300 ವಿದ್ಯುತ್ ಬಸ್ ಪಡೆಯುವ ಸಂಬಂಧ ಟೆಂಡರ್ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಇದರ ಬೆನ್ನಲ್ಲೇ ಗುತ್ತಿಗೆ ಮಾದರಿಯಲ್ಲಿ 1500 ಡೀಸೆಲ್ ಪಡೆಯುವ ಟೆಂಡರ್ ಆಹ್ವಾನಿಸಲಾಗಿದೆ. ಗುತ್ತಿಗೆ ಮಾದರಿಯಲ್ಲಿ ಬಸ್ ಪೂರೈಸುವ ಕಂಪನಿಯೇ ಬಸ್‍ಗಳ ನಿರ್ವಹಣೆ ಮಾಡಬೇಕು. ಬಿಎಂಟಿಸಿ ಕಿ.ಮೀ. ಲೆಕ್ಕದಲ್ಲಿ ಕಂಪನಿಗೆ ಹಣ ಪಾವತಿಸಲಿದೆ. ಟೆಂಡರ್‍ನಲ್ಲಿ ಭಾಗವಹಿಸುವ ಕಂಪನಿಗಳು ಎಷ್ಟು ಮೊತ್ತಕ್ಕೆ ಬಿಡ್ ಸಲ್ಲಿಸಲಿವೆ ಎಂಬುದರ ಮೇಲೆ ಬಿಎಂಟಿಸಿ ಕಿ.ಮೀ.ಗೆ ದರ ನಿಗದಿ ಮಾಡಲಿದೆ. ಈ ಗುತ್ತಿಗೆ ಮಾದರಿ ಬಸ್‍ಗಳ ಬಣ್ಣ ಕೂಡ ಬದಲಾಗಲಿದೆ. ಇದಕ್ಕೆ ಬಿಎಂಟಿಸಿ ನೌಕರರು ಆಕ್ರೋಶ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

 

NEWS DESK

TIMES OF BENGALURU