ಔಷಧ ಮಳಿಗೆಗಳ ಮಾಹಿತಿ ಪಡೆದ ಬಿಬಿಎಂಪಿ

ಬೆಂಗಳೂರು: ನಗರದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು ಹಾಗೂ ರೋಗ ಲಕ್ಷಣಗಳಿದ್ದರೂ ಜನ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಲು ಹಿಂದೇಟು ಹಾಕುತ್ತಿರುವುದು ಬಿಬಿಎಂಪಿಗೆ ತಲೆನೋವಾಗಿ ಪರಿಣಮಿಸಿದೆ.

ಈ ಸವಾಲುಗಳನ್ನು ಎದುರಿಸುವ ಮಾರ್ಗೋಪಾಯಗಳ ಬಗ್ಗೆ ಚರ್ಚಿಸಲು ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ್ ಪ್ರಸಾದ್ ಅವರು ಅಧಿಕಾರಿಗಳೊಂದಿಗೆ ನಿನ್ನೆ ಸಮಾಲೋಚನಾ ಸಭೆ ನಡೆಸಿದರು. ಕೋವಿಡ್ ಸೋಂಕು ಹರಡುವಿಕೆ ಉಲ್ಬಣಿಸದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಸೂಕ್ತ ಯೋಜನೆ ರೂಪಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಜ್ವರ ತಪಾಸಣಾ ಕ್ಲಿನಿಕ್‍ಗಳು, ಕೋವಿಡ್ ಪರೀಕ್ಷೆ ನಡೆಸುವ ಸಂಚಾರ ಕೇಂದ್ರಗಳು ಹಾಗೂ ಇನ್ನಿತರೆ ಆಸ್ಪತ್ರೆಗಳಲ್ಲಿ ವ್ಯಕ್ತಿಗಳಿಂದ ಮೂಗಿನ ದ್ರವ ಸಂಗ್ರಹಿಸುವ ವೇಳೆ ಕಡ್ಡಾಯವಾಗಿ ಅವರ ಮೊಬೈಲ್ ಸಂಖ್ಯೆ, ವಿಳಾಸ ಹಾಗೂ ಪಿನ್ ಕೋಡ್‍ಗಳನ್ನು ನಿಖರವಾಗಿ ಸಂಗ್ರಹ ಮಾಡಿಕೊಳ್ಳಬೇಕು. ಸರಿಯಾದ ಮಾಹಿತಿ ಪಡೆಯದಿದ್ದರೆ ಸೋಂಕು ದೃಢಪಟ್ಟ ವ್ಯಕ್ತಿಯನ್ನು ಪತ್ತೆ ಹಚ್ಚುವುದು ಕಷ್ಟವಾಗಲಿದೆ. ಇದರಲ್ಲಿ ಲೋಪ ಕಂಡುಬಂದರೆ ಸಂಬಂಧಿಸಿದ ವೈದ್ಯಾಧಿಕಾರಿಗಳನ್ನು ಅಮಾನತು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

NEWS DESK

TIMES OF BENGALURU