ಬಿಬಿಎಂಪಿ ಜಂಟಿ ಆಯುಕ್ತರ ಆಪ್ತ ಸಹಾಯಕ ನೇಣಿಗೆ ಶರಣು

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಪೂರ್ವ ವಿಭಾಗದ ಜಂಟಿ ಆಯುಕ್ತರ ಆಪ್ತ ಸಹಾಯಕ ರಾಕೇಶ್ ಗೌಡ (33) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಟಿ.ನರಸೀಪುರದ ರಾಕೇಶ್ ಗೌಡ, 12 ವರ್ಷಗಳಿಂದ ಬಿಬಿಎಂಪಿಯಲ್ಲಿ ಕೆಲಸ ಮಾಡುತ್ತಿದ್ದರು. ಕುಟುಂಬಸ್ಥರು ನೀಡಿರುವ ದೂರು ಆಧರಿಸಿ ವಿಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಪಾಟೀಲ ಹೇಳಿದರು.

ಮಂಗಳವಾರ ಕೆಲಸ ಮುಗಿಸಿ ಮನೆಗೆ ಬಂದು ಊಟ ಮಾಡಿ ಮಲಗಿದ್ದ ರಾಕೇಶ್, ಬುಧವಾರ ಮಧ್ಯಾಹ್ನ 12 ಗಂಟೆಯಾದರೂ ಕೊಠಡಿಯಿಂದ ಹೊರಗೆ ಬಂದಿರಲಿಲ್ಲ. ಒಳಗಿನಿಂದ ಲಾಕ್ ಮಾಡಿಕೊಂಡಿದ್ದರು. ಅಕ್ಕನ ಮಗಳು, ಬಾಗಿಲು ಬಡಿದರೂ ತೆಗೆದಿರಲಿಲ್ಲ. ಗಾಬರಿಗೊಂಡ ಆಕೆ, ಅಣ್ಣನನ್ನು ಮನೆಗೆ ಕರೆಸಿದ್ದಳು. ಇಬ್ಬರೂ ಬೀಗ ಮುರಿದು ಬಾಗಿಲು ತೆಗೆದಿದಿದ್ದರು. ಫ್ಯಾನ್‍ಗೆ ರಾಕೇಶ್ ನೇಣು ಹಾಕಿಕೊಂಡಿದ್ದು ಕಂಡಿತ್ತು. ಉಸಿರಾಡುತ್ತಿರಬಹುದೆಂದು ತಿಳಿದಿದ್ದ ಅವರು, ಸ್ಥಳೀಯರ ನೆರವಿನಿಂದ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ದಿದ್ದರು. ರಾಕೇಶ್ ಮೃತಪಟ್ಟಿರುವುದಾಗಿ ವೈದ್ಯರು ಹೇಳಿದರು’ ಎಂದೂ ಸಂಜೀವ್ ಪಾಟೀಲ ಮಾಹಿತಿ ನೀಡಿದರು.

NEWS DESK

TIMES OF BENGALURU