ರಾಜ್ಯಕ್ಕೆ 15.25 ಲಕ್ಷ ಡೋಸ್ ಲಸಿಕೆ ಆಗಮನ

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಲಸಿಕೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ನಿತ್ಯ ಒಂದು ಲಕ್ಷಕ್ಕೂ ಅಧಿಕ ಮಂದಿ ಲಸಿಕೆ ಪಡೆಯುತ್ತಿದ್ದಾರೆ. ಈ ಹಿನ್ನೆಲೆ ಸೋಮವಾರ ಮತ್ತೆ 15.25 ಲಕ್ಷ ಡೋಸ್‍ಗಳ ಲಸಿಕೆ ರಾಜ್ಯಕ್ಕೆ ಬರಲಿದೆ.

ಏ.1 ರಿಂದ 45 ವರ್ಷ ಮೇಲ್ಪಟ್ಟವರಿಗೆ ಲಸಿಕೆಗೆ ಅನುಮತಿ ನೀಡಿದ ಹಿನ್ನೆಲೆ ರಾಜ್ಯದಲ್ಲಿ ಹೆಚ್ಚು ಮಂದಿ ಲಸಿಕೆ ಪಡೆಯುತ್ತಿದ್ದಾರೆ. ಶನಿವಾರ ದಾಖಲೆಯ ಎರಡು ಲಕ್ಷಕ್ಕೂ ಅಧಿಕ ಮಂದಿ ಲಸಿಕೆ ಪಡೆದಿದ್ದಾರೆ. ಭಾನುವಾರ ರಜೆ ದಿನವಾದ ಹಿನ್ನೆಲೆ 8,892 ಮಂದಿ 45 ವರ್ಷ ಮೇಲ್ಪಟ್ಟವರು, 5,637 ಮಂದಿ ಹಿರಿಯರು ಲಸಿಕೆ ಪಡೆದಿದ್ದಾರೆ. ರಾಜ್ಯದಲ್ಲಿ ಈವರೆಗೂ 5.7 ಲಕ್ಷ ಆರೋಗ್ಯ ಕಾರ್ಯಕರ್ತರು, 2.46 ಲಕ್ಷ ಮುಂಚೂಣಿ ಕಾರ್ಯಕರ್ತರು, 45 ವರ್ಷದಿಂದ 59 ವರ್ಷದವರೆಗಿನ 9.10 ಲಕ್ಷ ಮಂದಿ, 60 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು 21.65 ಲಕ್ಷ ಮಂದಿ ಸೇರಿ 43.5 ಲಕ್ಷ ಮಂದಿ ಲಸಿಕೆ ಪಡೆದಿದ್ದಾರೆ.

NEWS DESK

TIMES OF BENGALURU