ಸರಗಳ್ಳತನ ಪ್ರಕರಣ ; ಆರೋಪಿಯ ಬಂಧನ

ಬೆಂಗಳೂರು: ವೃದ್ಧೆಯ ಸರ ಅಪಹರಿಸಿದ್ದ ಯುವಕನನ್ನು ಉತ್ತರ ವಿಭಾಗದ ಬಾಗಲಗುಂಟೆ ಠಾಣೆ ಪೊಲೀಸರು ಬಂಧಿಸಿ 90 ಸಾವಿರ ಬೆಲೆಯ 20 ಗ್ರಾಂ ಮಾಂಗಲ್ಯ ಸರ ಹಾಗೂ ಕೃತ್ಯಕ್ಕೆ ಬಳಸಿದ್ದ ಬೈಕ್ ವಶಪಡಿಸಿಕೊಂಡಿದ್ದಾರೆ. ರಾಜಾಜಿನಗರದ 6ನೆ ಬ್ಲಾಕ್ ನಿವಾಸಿ ಮಜೀಶಾ ಅಹಮ್ಮದ್ (26) ಬಂಧಿತ ಆರೋಪಿ. ಮಾರ್ಚ್ 19ರಂದು ನೃಪತುಂಗ ರಸ್ತೆ, 1ನೆ ಕ್ರಾಸ್ ನಿವಾಸಿ ನರಸಮ್ಮ (60) ಎಂಬುವವರು ಹಾಲು ತೆಗೆದುಕೊಂಡು ಮನೆ ಬಳಿ ಹೋಗಿ ಗೇಟ್ ತೆಗೆಯುತ್ತಿದ್ದಂತೆ ಸ್ಕೂಟರ್‍ನಲ್ಲಿ ಬಂದ ವ್ಯಕ್ತಿ ಮಸೀದಿಗೆ ಹೋಗುವ ರಸ್ತೆ ಬಗ್ಗೆ ಕೇಳುವ ನೆಪದಲ್ಲಿ ಅವರ ಗಮನ ಸೆಳೆದು 20 ಗ್ರಾಂ ತೂಕದ ಮಾಂಗಲ್ಯ ಸರ ಅಪಹರಿಸಿ ಪರಾರಿಯಾಗಿದ್ದನು.

ಈ ಬಗ್ಗೆ ಬಾಗಲಗುಂಟೆ ಠಾಣೆ ಪೊಲೀಸರು ಸರಗಳ್ಳತನ ಪ್ರಕರಣ ದಾಖಲಿಸಿಕೊಂಡಿದ್ದರು. ರಾಜಾಜಿನಗರ ನವರಂಗ್ ಬಳಿ ದ್ವಿಚಕ್ರ ವಾಹನದಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದಾನೆಂಬ ಮಾಹಿತಿ ಮೇರೆಗೆ ಪಿಎಸ್‍ಐ ಸಂತೋಷ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಹೋಗಿ ಪರಿಶೀಲಿಸಿ ಆತನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಕಳ್ಳತನ ಮಾಡಿದ್ದ ಬೈಕ್‍ನಲ್ಲಿ ಬಂದಿದ್ದು, ಆತನ ಬಳಿ ಚಿನ್ನದ ಸರ ಪತ್ತೆಯಾಗಿದೆ. ನಂತರ ಆತನ್ನು ಪೊಲೀಸರು ತಮ್ಮ ವಶಕ್ಕೆ ಪಡೆದಿದ್ದಾರೆ.

NEWS DESK

TIMES OF BENGALURU