ಜನರಿಗೆ ಸಂಚಕಾರವಾದ ಸ್ಮಾರ್ಟ್ ಸಿಟಿ ಕಾಮಗಾರಿ

ಬೆಂಗಳೂರು: ಅವೆನ್ಯೂ ರಸ್ತೆಯಲ್ಲಿ ಕುಂಟುತ್ತಾ ಸಾಗುತ್ತಿರುವ ಸ್ಮಾರ್ಟ್ ಸಿಟಿ ಹಾಗೂ ಟೆಂಡರ್‍ಶ್ಯೂರ್ ಕಾಮಗಾರಿಗಳಿಂದ ಜನರ ಸಂಚಾರಕ್ಕೆ ಸಂಚಕಾರ ಎದುರಾಗಿದೆ. ಅಗೆದು ಹಾಗೆಯೇ ಬಿಟ್ಟಿರುವ ಈ ರಸ್ತೆಯಲ್ಲಿ, ದಾರಿ ತೋಚದ ಪಾದಚಾರಿಗಳು ಹಳ್ಳ ಹಾಗೂ ಗುಂಡಿಗಳನ್ನು ದಾಟುತ್ತಾ ಮುಂದಡಿ ಇಡಬೇಕಾಗಿದೆ. ದ್ವಿಚಕ್ರ ವಾಹನ ಸವಾರರು ಬಿದ್ದು, ಎದ್ದು ಸಾಗಬೇಕಾದ ಸ್ಥಿತಿ ಇದೆ.

ಅವೆನ್ಯೂ ರಸ್ತೆಯ ಕಾಮತ್ ಹೋಟೆಲ್‍ನಿಂದ ಶುರುವಾಗಿ ಚಿಕ್ಕಪೇಟೆಯತ್ತ ಸಾಗುವ ಮಾರ್ಗದಲ್ಲಿ ಅಂದಾಜು 300 ಮೀಟರ್‍ವರೆಗೆ ಸ್ಮಾರ್ಟ್‍ಸಿಟಿ ಕಾಮಗಾರಿಗಳು ಪ್ರಗತಿಯಲ್ಲಿವೆ. ಹೆಚ್ಚು ಜನ ಸಂಚಾರವಿರುವ ಈ ರಸ್ತೆಯಲ್ಲಿ ಕಾಮಗಾರಿಯ ಆಮೆವೇಗ ಜನರನ್ನು ಹೈರಾಣಾಗಿಸಿದೆ. ಕಾಮಗಾರಿಗಾಗಿ ರಸ್ತೆಯಲ್ಲಿ ಆಳೆತ್ತರದ ಗುಂಡಿಗಳನ್ನು ಅಗೆದಿರುವುದರಿಂದ ವಾಹನದಲ್ಲಿ ಸಂಚರಿಸಲು ಸಾಧ್ಯವಾಗುತ್ತಿಲ್ಲ. ಹಳ್ಳಗಳನ್ನು ದಾಟುವಾಗ ಹಲವರು ತಮ್ಮ ವಾಹನದ ಸಮೇತ ಉರುಳುವ ಘಟನೆಗಳು ಪ್ರತಿನಿತ್ಯ ಸಂಭವಿಸುತ್ತಿವೆ.

NEWS DESK

TIMES OF BENGALURU