ಕಳ್ಳತನ ಎಸಗುತ್ತಿದ್ದ ಆರೋಪಿಯ ಬಂಧನ

ಬೆಂಗಳೂರು: ಅಪರಾಧ ಪ್ರಕರಣವೊಂದರಲ್ಲಿ ಮೂರು ವರ್ಷ ಶಿಕ್ಷೆ ಅನುಭವಿಸಿ, ಜೈಲಿನಿಂದ ಹೊರಬಂದು ಕಳ್ಳತನ ಎಸಗುತ್ತಿದ್ದ ಆರೋಪಿ ಪ್ರೇಮ್‍ಕುಮಾರ್‍ನನ್ನು (32) ನಂದಿನಿ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕೆಜಿಎಫ್ ಅಂಡರ್‍ಸನ್ ಪೇಟೆಯ ಪ್ರೇಮ್‍ಕುಮಾರ್, ಹಲವು ವರ್ಷಗಳಿಂದ ಕೃತ್ಯ ಎಸಗುತ್ತಿದ್ದ. ಆತನಿಂದ 14.50 ಲಕ್ಷ ಮೌಲ್ಯದ 320 ಗ್ರಾಂ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸುತ್ತಿದ್ದ ಕಬ್ಬಿಣದ ರಾಡ್ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು. ನಂದಿನಿ ಲೇಔಟ್ ಠಾಣೆ ವ್ಯಾಪ್ತಿಯಲ್ಲಿ ವಾಸವಿದ್ದ ಕೃಷ್ಣಪ್ಪ ಎಂಬುವರು 2020ರ ಡಿಸೆಂಬರ್ 2ರಂದು ಕುಟುಂಬ ಸಮೇತ ಊರಿಗೆ ಹೋಗಿದ್ದರು.

ಡಿ. 12ರಂದು ಅವರಿಗೆ ಕರೆ ಮಾಡಿದ್ದ ಪಕ್ಕದ ಮನೆಯವರು, ಯಾರೋ ನಿಮ್ಮ ಮನೆಯ ಬಾಗಿಲು ಮೀಟಿದ್ದು, ಕಳ್ಳತನ ನಡೆದಿರಬಹುದು ಎಂದು ಮಾಹಿತಿ ನೀಡಿದ್ದರು. ಮನೆಗೆ ಬಂದಿದ್ದ ಕೃಷ್ಣಪ್ಪ, ಪರಿಶೀಲನೆ ನಡೆಸಿದಾಗ ಕಳ್ಳತನವಾಗಿದ್ದು ಗೊತ್ತಾಗಿತ್ತು. ಬಳಿಕ ಠಾಣೆಗೆ ದೂರು ನೀಡಿದ್ದರು ಎಂದೂ ತಿಳಿಸಿದರು. ಕೃತ್ಯ ಎಸಗಿ ಪರಾರಿಯಾಗುತ್ತಿದ್ದ ಆರೋಪಿಯ ಮುಖಚಹರೆ ಮನೆ ಸಮೀಪದಲ್ಲಿದ್ದ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಆತನಿಗಾಗಿ ಹುಡುಕಾಟ ನಡೆದಿತ್ತು. ಏಪ್ರಿಲ್ 20ರಂದು ಬೆಳಿಗ್ಗೆ ಶಂಕರನಗರದಲ್ಲಿ ಆರೋಪಿ ಸಿಕ್ಕಿಬಿದ್ದಿದ್ದಾನೆ.

NEWS DESK

TIMES OF BENGALURU