ಸಿಲಿಂಡರ್ ಸ್ಫೋಟ ; ನಾಲ್ವರಿಗೆ ಗಾಯ

ಬೆಂಗಳೂರು : ಹೋಟೆಲ್ ವೊಂದರಲ್ಲಿ ಗ್ಯಾಸ್ ಸಿಲಿಂಡರ್ ನಿಂದ ಅನಿಲ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ ಗ್ರಾಹಕರೊಬ್ಬರು ಸೇರಿ ನಾಲ್ವರು ಗಾಯಗೊಂಡಿರುವ ಘಟನೆ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂದು ಬೆಳಗೆ ಸಂಭವಿಸಿದೆ. ಹೋಟೆಲ್ ನೌಕರರಾದ ರಾಜಣ್ಣ(56), ಗಾಯತ್ರಿ (51) ಭಾಸ್ಕರ್ ಮತ್ತು ಗ್ರಾಹಕ ಗಂಗರಾಜು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆಪಡೆಯುತ್ತಿದ್ದಾರೆ.

ಕಾಮಾಕ್ಷಿಪಾಳ್ಯ ವ್ಯಾಪ್ತಿಯ ತೋಟದ ರಸ್ತೆಯಲ್ಲಿ ಶ್ರೀ ವಿನಾಯಕ ಹೋಟೆಲ್ ಇದೆ. ಇಂದು ಬೆಳಗ್ಗೆ 11.30ರ ಸುಮಾರಿನಲ್ಲಿ ಸಿಲಿಂಡರ್‍ನಿಂದ ಅನಿಲ ಸೋರಿಕೆಯಾಗುತ್ತಿರುವುದನ್ನು ಗಮನಿಸಿದ ನೌಕರ, ರೆಗ್ಯುಲೇಟರನ್ನು ತೆಗೆದು ಸರಿಯಾಗಿ ಅಳವಡಿಸಲು ಮುಂದಾಗುತ್ತಿದ್ದಂತೆ ಪಕ್ಕದಲ್ಲೇ ಉರಿಯುತ್ತಿದ್ದ ಸೌದೆ ಒಲೆಯ ಬೆಂಕಿ ತಾಗಿ ಹೊತ್ತಿಕೊಂಡಿದೆ. ನೋಡನೋಡುತ್ತಿದ್ದಂತೆ ಬೆಂಕಿ ಹೋಟೆಲ್ ಪೂರ್ತಿ ಆವರಿಸಿದ್ದರಿಂದ ತಿಂಡಿ ಸೇವಿಸಲು ಬಂದಿದ್ದ ಗಂಗರಾಜು ಸೇರಿ ಮೂವರು ನೌಕರರು ಗಾಯಗೊಂಡಿದ್ದಾರೆ. ವಿಷಯ ತಿಳಿದು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಗಾಯಾಳುಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

NEWS DESK

TIMES OF BENGALURU