ಜನರ ಕಣ್ಣಿಗೆ ಮಂಕುಬೂದಿ ಎರಚಬೇಡಿ

ಬೆಂಗಳೂರು : ಕೊರೊನಾ ನಿಯಂತ್ರಿಸಲು ಜವಾಬ್ದಾರಿಯುತ ಸ್ಥಾನದಲ್ಲಿರುವ ನಾಯಕರುಗಳು ಸರ್ಕಾರಕ್ಕೆ ಸೂಕ್ತ ಸಲಹೆ ನೀಡಬೇಕೆ ಹೊರತು ಜನರನ್ನು ದಿಕ್ಕುತಪ್ಪಿಸುವ ಕೆಲಸ ಮಾಡಬಾರದು ಎಂದು ಉಪಮುಖ್ಯಮಂತ್ರಿ ಡಾ.ಅಶ್ವತ್ಥ ನಾರಾಯಣ್ ವಾಗ್ದಾಳಿ ನಡೆಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಯಾರೇ ಆಗಲಿ ಆಡಳಿತದಲ್ಲಿ ಅನುಭವವಿರುವವರು ಜನರ ಕಣ್ಣಿಗೆ ಮಂಕುಬೂದಿ ಎರಚುವ ಕೆಲಸ ಮಾಡಬೇಡಿ ಎಂದು ಟೀಕಾಪ್ರಹಾರ ನಡೆಸಿದರು.

ಪ್ರತಿಪಕ್ಷಗಳು ಈವರೆಗೂ ಸರ್ಕಾರಕ್ಕೆ ಯಾವತ್ತಾದರೂ ಒಂದೇ ಒಂದು ಉತ್ತಮವಾದ ಸಲಹೆ ನೀಡಿದ್ದಾವಾ? ಕೇವಲ ನಕಾರಾತ್ಮಕವಾಗಿ ಮಾತನಾಡುವುದೇ ಅವರಿಗೆ ಅಭ್ಯಾಸವಾಗಿದೆ. ಪ್ರತಿಯೊಂದನ್ನೂ ಟೀಕೆ ಮಾಡುವುದನ್ನೇ ಕಾಯಕ ಮಾಡಿಕೊಂಡಿದ್ದಾರೆ ಎಂದು ಕಿಡಿಕಾರಿದರು. 13 ಬಾರಿ ಬಜೆಟ್ ಮಂಡನೆ ಮಾಡಿರುವ ಸಿದ್ದರಾಮಯ್ಯ ಹಾಗೂ ಎರಡು ಬಾರಿ ಮುಖ್ಯಮಂತ್ರಿಯಾಗಿರುವ ಎಚ್.ಡಿ.ಕುಮಾರಸ್ವಾಮಿ ಅವರು ಆಡಳಿತದಲ್ಲಿ ಅಪಾರ ಅನುಭವವುಳ್ಳವರು. ಸರ್ಕಾರಕ್ಕೆ ಇಂತಹ ಸಂದರ್ಭದಲ್ಲಿ ಸಲಹೆ ಕೊಡಬೇಕೆ ಹೊರತು ನಕಾರಾತ್ಮಕ ಟೀಕೆ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

NEWS DESK

TIMES OF BENGALURU