ಕುಂಭ ಮೇಳದಿಂದ ಬರೋರಿಗೆ ಆರ್ ಟಿಪಿಸಿಆರ್ ಕಡ್ಡಾಯ

ಬೆಂಗಳೂರು : ಕುಂಭ ಮೇಳದಿಂದ ಮರಳುವವರು ಕಡ್ಡಾಯವಾಗಿ  ಆರ್ ಟಿಪಿಸಿಆರ್ ಪರೀಕ್ಷೆಗೆ ಒಳಗಾಗಬೇಕು ಹಾಗೂ ವರದಿ ಬರುವವರೆಗೂ ಮನೆಯಲ್ಲಿ ಕ್ವಾರಂಟೈನ್ ಆಗಿರಬೇಕು ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೂಚನೆ ನೀಡಿದೆ. ಉತ್ತರಾಖಂಡ ರಾಜ್ಯದ ಹರಿದ್ವಾರದಲ್ಲಿ ನಡೆದ ಕುಂಭಮೇಳದಲ್ಲಿ ಲಕ್ಷಾಂತರ ಮಂದಿ ಭಾಗವಹಿಸಿದ್ದರು. ಬೆಂಗಳೂರು, ಕರ್ನಾಟಕದಿಂದಲೂ ಸಾವಿರಾರು ಮಂದಿ ಅಲ್ಲಿಗೆ ತೆರಳಿದ್ದಾರೆ.

ಕುಂಭಮೇಳದಲ್ಲಿ ಭಾಗವಹಿಸಿದ್ದ ಹಲವಾರು ಮಂದಿಗೆ ಕೊರೊನಾ ಸೋಂಕು ತಗುಲಿರುವುದು ಪತ್ತೆಯಾಗಿದ್ದು, ಆತಂಕ ಮೂಡಿಸಿದೆ. ಅಲ್ಲಿಂದ ವಾಪಸ್ ಬಂದವರಿಗೆ ಸೋಂಕು ತಗುಲಿದ್ದರೆ ಅದು ಕರ್ನಾಟಕದಲ್ಲಿ ಇತರರಿಗೂ ಹರಡಬಹುದು ಎಂಬ ಆತಂಕದಿಂದ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿರುವ ರಾಜ್ಯ ಸರ್ಕಾರ ಕುಂಭ ಮೇಳದಲ್ಲಿ ಭಾಗವಹಿಸಿ ವಾಪಸ್ ಬಂದ ಭಕ್ತರು, ಸಂದರ್ಶಕರು ಕಡ್ಡಾಯವಾಗಿ ಹೋಮ್ ಕ್ವಾರಂಟೈನ್ ಆಗಿರಬೇಕು. ಕೇಂದ್ರ ಸರ್ಕಾರದ ಮಾರ್ಗಸೂಚಿಗಳನ್ನು ಪಾಲನೆ ಮಾಡಬೇಕು. ಆರ್ ಟಿಪಿಸಿಆರ್ ಪರೀಕ್ಷೆಗೆ ಒಳಪಡಬೇಕು. ನೆಗೆಟಿವ್ ವರದಿ ಬರುವವರೆಗೂ ಕ್ವಾರಂಟೈನ್ ನಿಂದ ಹೊರಗಡೆ ಬರಬಾರದು. ಒಂದು ವೇಳೆ ಸೋಂಕು ತಗುಲಿದ್ದರೆ ಚಿಕಿತ್ಸೆ ಪಡೆಯಬೇಕೆಂದು ಸೂಚನೆ ನೀಡಲಾಗಿದೆ.

NEWS DESK

TIMES OF BENGALURU