ಚುನಾವಣಾ ಪ್ರಚಾರದಲ್ಲಿ ವಾಹನ ಬಳಸುವಂತಿಲ್ಲ

ಚುನಾವಣಾ ಪ್ರಚಾರದಲ್ಲಿ ವಾಹನ ಬಳಸುವಂತಿಲ್ಲ

ಬೆಂಗಳೂರು: ಕೋವಿಡ್ ಸೋಂಕು ವ್ಯಾಪಕವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಚುನಾವಣಾ ಆಯೋಗವು ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಅನುಸರಿಸಬೇಕಾದ ಸೂಚನೆಗಳನ್ನು ಹೊರಡಿಸಿದೆ. ಘೋಷಣೆಯಾಗಿರುವ ನಗರ ಸ್ಥಳೀಯ ಸಂಸ್ಥೆಗಳ ಸಾರ್ವತ್ರಿಕ ಚುನಾವಣೆ ಮತ್ತು ಉಪಚುನಾವಣೆಗೆ ಸಂಬಂದಿಸಿದಂತೆ ಕಣದಲ್ಲಿರುವ ಅಭ್ಯರ್ಥಿಗಳು ಚುನಾವಣಾ ಪ್ರಚಾರ ಕೈಗೊಳ್ಳುವ ಸಂದರ್ಭದಲ್ಲಿ ಗರಿಷ್ಠ ಐದು ಜನ ಬೆಂಬಲಿಗರೊಂದಿಗೆ ಮುಖಗವಸು ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಂಡು ಮನೆ ಮನೆಗೆ ಭೇಟಿ ನೀಡಿ ಪ್ರಚಾರ ನಡೆಸಬೇಕು ಎಂದು ಸೂಚಿಸಿದೆ.

ಪ್ರಚಾರಕ್ಕೆ ಯಾವುದೇ ವಾಹನಗಳನ್ನು ಬಳಸುವುದು ಹಾಗೂ ಗುಂಪು ಗುಂಪಾಗಿ ಪ್ರಚಾರ ಮಾಡುವುದನ್ನು ನಿಷೇಧಿಸಿದೆ. ಅಭ್ಯರ್ಥಿಗಳು ಪ್ರಚಾರದ ಸಂದರ್ಭದಲ್ಲಿ ಕಡ್ಡಾಯವಾಗಿ ಮುಖಗವಸು ಧರಿಸಬೇಕು. ವಿದ್ಯುನ್ಮಾನ ಮಾಧ್ಯಮದಲ್ಲಿ ಪ್ರಚಾರ ಕೈಗೊಳ್ಳಬಹುದಾಗಿದೆ. ನಿಯಮಾನುಸಾರ ಮುದ್ರಿಸಿದ ಕರಪತ್ರಗಳನ್ನು ಹಂಚಬಹುದು. ಕರಪತ್ರ ಹಂಚುವ ಸಂದರ್ಭದಲ್ಲಿ ಕಡ್ಡಾಯವಾಗಿ ಮಾಸ್ಕ್ ಮತ್ತು ಕೈಗವಸು ಧರಿಸಬೇಕು. ಈ ಸೂಚನೆಗಳನ್ನು ಹೊರತುಪಡಿಸಿದಂತೆ ಬೇರಾವುದೇ ತರಹದ ಪ್ರಚಾರ ಕೈಗೊಳ್ಳುವಂತಿಲ್ಲ ಎಂದು ರಾಜ್ಯ ಚುನಾವಣಾ ಆಯೋಗ ಆದೇಶದಲ್ಲಿ ಸ್ಪಷ್ಟಪಡಿಸಿದೆ. ಬೆಂಗಳೂರು ಗ್ರಾಮಾಂತರ, ರಾಮನಗರ, ಚಿಕ್ಕಬಳ್ಳಾಪುರ, ಶಿವಮೊಗ್ಗ, ಹಾಸನ, ಕೊಡಗು, ಬೀದರ್, ಹಾವೇರಿ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಘೋಷಣೆಯಾಗಿವೆ.

NEWS DESK
TIMES OF BENGALURU