ಯಾವುದೇ ಸಂಧಾನದ ಮಾತುಕತೆ ನಡೆದಿಲ್ಲ

ಯಾವುದೇ ಸಂಧಾನದ ಮಾತುಕತೆ ನಡೆದಿಲ್ಲ

ಬೆಂಗಳೂರು : ಮುಷ್ಕರ ನಿರತ ಸಾರಿಗೆ ನೌಕರರು ಮತ್ತು ಸರ್ಕಾರದ ನಡುವೆ ಸಂಧಾನದ ಮಾತುಕತೆ ನಡೆದಿದೆ ಎಂದು ಕೆಲವು ಮಾಧ್ಯಮಗಳಲ್ಲಿ ವರದಿಯಾಗಿರುವುದು ನನ್ನ ಗಮನಕ್ಕೆ ಬಂದಿದೆ. ಆದರೆ ಆ ರೀತಿಯ ಯಾವುದೇ ಸಂಧಾನದ ಪ್ರಕ್ರಿಯೆ ನಡೆದಿಲ್ಲ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಸ್ಪಷ್ಟನೆ ನೀಡಿದ್ದಾರೆ. ಸಾರಿಗೆ ನೌಕರರ ಮುಷ್ಕರದ ಪ್ರಾರಂಭದ ಸಂದರ್ಭದಲ್ಲಿಯೇ ಮುಖ್ಯಮಂತ್ರಿಗಳು ಯಾವುದೇ ಮಾತುಕತೆ, ಸಂಧಾನದ ಅವಶ್ಯಕತೆ ಇರುವುದಿಲ್ಲ. ಮೊದಲು ಸಾರಿಗೆ ನೌಕರರು ಕರ್ತವ್ಯಕ್ಕೆ ಹಾಜರಾಗಲಿ ಎಂದು ತಾಕೀತು ಮಾಡಿದ್ದರು. ಕೆಲವು ಮುಖಂಡರು ತಾವು ಮುಷ್ಕರ ನಿರತರ ಪರವಾಗಿ ಗೃಹ ಸಚಿವರಾದ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾಗಿ ತಿಳಿಸಿರುತ್ತಾರೆ.

ಅದನ್ನು ನಾನು ಮಾಧ್ಯಮದಲ್ಲಿ ಗಮನಿಸಿದ್ದೇನೆ. ಆದರೆ ಬೊಮ್ಮಾಯಿ ಅವರನ್ನು ಈ ಬಗ್ಗೆ ಕೇಳಿದಾಗ, ಮುಖ್ಯಮಂತ್ರಿಗಳ ಮಾತನ್ನು ಮೀರಿ ಈಗ ಸಂಧಾನದ ಮಾತುಕತೆ ನಡೆಸುವ ಪ್ರಶ್ನೆಯೇ ಇಲ್ಲ. ಮುಖ್ಯಮಂತ್ರಿಗಳು ತಿಳಿಸಿದಂತೆ ಮೊದಲು ಅವರು ಕರ್ತವ್ಯಕ್ಕೆ ಹಾಜರಾಗಲಿ ಎಂದು ಅವರು ತಿಳಿಸಿದ್ದಾರೆ. ಆದರೆ ಇದನ್ನು ತಿರುಚಿ ಮುಷ್ಕರ ನಿರತ ಸಾರಿಗೆ ನೌಕರರ ಮುಖಂಡರು ತಮ್ಮ ಅನುಕೂಲಕ್ಕೆ ತಕ್ಕಂತೆ ಮಾಧ್ಯಮಕ್ಕೆ ಪ್ರತಿಕ್ರಿಯಿಸುತ್ತಿರುವುದು ಸರಿಯಲ್ಲ. ಆದ್ದರಿಂದ ಇನ್ನೂ ಕಾಲ ಮಿಂಚಿಲ್ಲ. ಎಲ್ಲಾ ಸಾರಿಗೆ ನೌಕರ ಬಂಧುಗಳೂ ತಕ್ಷಣಕ್ಕೆ ಕರ್ತವ್ಯಕ್ಕೆ ಹಾಜರಾಗಬೇಕೆಂದು ಲಕ್ಷ್ಮಣ ಸವದಿ ಮನವಿ ಮಾಡಿಕೊಂಡಿದ್ದಾರೆ.

NEWS DESK
TIMES OF BENGALURU