ವಿಪತ್ತು ಸ್ಪಂದನಾ ಪಡೆಯ ಬಲವನ್ನು ಹೆಚ್ಚಿಸಲಾಗುವುದು

ಬೆಂಗಳೂರು: ರಾಜ್ಯ ವಿಪತ್ತು ಸ್ಪಂದನಾ ಪಡೆಯ ಬಲವನ್ನು ಹೆಚ್ಚಿಸಲಾಗುವುದು. ಅದರಜೊತೆಗೆ ಪ್ರಸಕ್ತ ವರ್ಷದಲ್ಲಿ 15 ಕೋಟಿ ರೂಪಾಯಿ ವೆಚ್ಚದಲ್ಲಿ ಅಗತ್ಯ ವಾಹನ, ಅತ್ಯಾಧುನಿಕ ಉಪಕರಣ ಖರೀದಿಯ ಜೊತೆಗೆ ರಾಜ್ಯದ ಎರಡು ಕಡೆ ಎಸ್ ಡಿ ಆರ್ ಎಫ್ ಕಚೇರಿಯನ್ನು ಸ್ಥಾಪಿಸುವುದಾಗಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವರಾದ ಬಸವರಾಜ ಬೊಮ್ಮಾಯಿ ತಿಳಿಸಿದರು. ರಾಜ್ಯ ಅಗ್ನಿಶಾಮಕ ತುರ್ತು ಸೇವೆ, ಗೃಹರಕ್ಷಕ, ಪೌರರಕ್ಷಣೆ ಎಸ್ ಡಿ ಆರ್ ಎಫ್ ನಿರ್ದೇಶನಾಲಯ ಬೆಂಗಳೂರಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 20 ಕೋಟಿ ರೂಪಾಯಿ ವೆಚ್ಚದಲ್ಲಿ ಖರೀದಿಸಲಾದ ಅತ್ಯಾಧುನಿಕ ರಕ್ಷಣಾ ಉಪಕರಣಗಳನ್ನು ಲೋಕಾರ್ಪಣೆ ಮಾಡಿದರು.

ರಾಜ್ಯ ಸರ್ಕಾರ ಎಸ್ ಡಿ ಆರ್ ಎಫ್ ಗೆ ಬಲ ನೀಡುವ ಕೆಲಸವನ್ನು ಮುಂದುವರಿಸುತ್ತದೆ. ಕಳೆದ ವರ್ಷ 100 ಜನ ನಿವೃತ್ತ ಸೇನಾ ಸಿಬ್ಬಂದಿಯನ್ನು ನೇಮಕ ಮಾಡಿ ಕೊಳ್ಳಲಾಗಿದೆ. ಪ್ರಸಕ್ತ ವರ್ಷ ಮತ್ತೆ ನೂರು ಜನ ನಿವೃತ್ತ ಮಿಲಿಟರಿ ಸಿಬ್ಬಂದಿಯನ್ನು ನೇಮಕ ಮಾಡುವಂತೆ ಆದೇಶಿಸಲಾಗಿದೆ. ದಾವಣಗೆರೆ, ಹುಬ್ಬಳ್ಳಿ- ಧಾರವಾಡ ಮತ್ತು ಬೆಳಗಾವಿ ನಡುವೆ 2 ಎಸ್ ಡಿ ಆರ್ ಎಫ್ ಕಚೇರಿಗಳನ್ನು ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು.

NEWS DESK

TIMES OF BENGALURU