ಬೆಂಗಳೂರು : ಖಾಲಿ ಗ್ಯಾಸ್ ಸಿಲಿಂಡರ್ ಗಳನ್ನು ಇಟ್ಟುಕೊಂಡು ರಸ್ತೆಯಲ್ಲಿ ಮಲಗಿ ಪ್ರತಿಭಟಿಸುವ ಮೂಲಕ ಬೆಲೆ ಏರಿಕೆಯನ್ನು ಖಂಡಿಸಿದ ವಾಟಾಳ್ ಅವರು, ನಿರಂತರವಾಗಿ ಬೆಲೆ ಏರಿಕೆಯಾಗುತ್ತಿರುವುದರಿಂದ ಬಡ ಹಾಗೂ ಮಧ್ಯಮವರ್ಗದವರ ಬದುಕು ಬರ್ಬಾದ್ ಆಗುತ್ತಿದೆ.
ಸರ್ಕಾರಗಳ ಧೋರಣೆಯಿಂದ ಜನಸಾಮಾನ್ಯರು ಬೀದಿಪಾಲಾಗುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಗ್ಯಾಸ್ ಸಿಲಿಂಡರ್ ಬೆಲೆ ೮೫೦ ರೂ. ಆಗಿದೆ, ಪೆಟ್ರೋಲ್ ಲೀಟರ್ ಒಂದಕ್ಕೆ ೧೦೦ ರೂ. ತಲುಪಿದೆ. ಡೀಸೆಲ್ ದರ ೮೫ ರೂ.ಗಳಾಗಿದೆ, ದಿನಸಿ ಪದಾರ್ಥಗಳ ಬೆಲೆ ದಿನೇ ದಿನೇ ಗಗನಮುಖಿಯಾಗುತ್ತಿದೆ. ಆದರೂ ಕೇಂದ್ರ ಹಾಗೂ ರಾಜ್ಯ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಅಕ್ಕಿ, ಬೇಳೆಕಾಳು, ಎಣ್ಣೆ, ಹಣ್ಣು, ತರಕಾರಿ ಹೀಗೆ ಎಲ್ಲಾ ಬೆಲೆಗಳು ಏರಿಕೆಯಾಗುತ್ತಲೇ ಇವೆ.
ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದ ಹೋಟೆಲ್, ತಿಂಡಿ ದರಗಳು ಕೂಡ ಹೆಚ್ಚಾಗಿವೆ. ಎಲ್ಲ ಬೆಲೆ ಏರಿಕೆಯ ಪರಿಣಾಮ ಜನಸಾಮಾನ್ಯರ ಮೇಲೆ ಹೊರೆ ಬೀಳುತ್ತಿದೆ. ಆದರೆ ಸರ್ಕಾರಗಳು ಕಣ್ಮುಚ್ಚಿ ಕುಳಿತಿವೆ. ಈಗಾಗಲೇ ಕೊರೊನಾದಿಂದ ಸಾಕಷ್ಟು ಸಂಕಷ್ಟಕ್ಕೀಡಾಗಿದ್ದ ಜನ ಬೆಲೆ ಏರಿಕೆಯಿಂದ ಮತ್ತಷ್ಟು ತತ್ತರಿಸಿ ಹೋಗಿದ್ದಾರೆ. ಇದೇ ರೀತಿ ಮುಂದುವರೆದರೆ ಜನಸಾಮಾನ್ಯರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಾರೆ ಎಂದು ಅವರು ಹೇಳಿದರು