ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೆ ರೌಡಿಗಳ ಆರ್ಭಟ ಹೆಚ್ಚಾದ ಹಿನ್ನೆಲೆ ರೌಡಿ ಆಸಾಮಿಗಳ ಮೇಲೆ ಹದ್ದಿನ ಕಣ್ಣಿಡಲು ಪೊಲೀಸ್ ಕಮೀಷನರ್ ಕಮಲ್ ಪಂತ್ ಸೂಚನೆ ನೀಡಿದ್ದಾರೆ. ನಿನ್ನೆ (ಜುಲೈ 6) ನಡೆದ ವಾರದ ಸಭೆಯಲ್ಲಿ ಡಿಸಿಪಿಗಳಿಗೆ ನಗರದ ರೌಡಿಗಳ ಮೇಲೆ ಹೆಚ್ಚು ನಿಗಾ ವಹಿಸಲು ಕಮಲ್ ಪಂತ್ ಸೂಚಿಸಿದ್ದಾರೆ. ಕಳೆದ 15 ದಿನಗಳಲ್ಲಿ ನಾಲ್ಕು ಪ್ರತಿಕಾರ ದಾಳಿಗಳು ನಡೆದಿವೆ. ಹಳೆ ವೈಷಮ್ಯದ ಮೇಲೆ ನಾಲ್ಕು ಕೊಲೆಯಾದ ಕಾರಣ ತಮ್ಮ ತಮ್ಮ ವ್ಯಾಪ್ತಿಯಲ್ಲಿರುವ ರೌಡಿಶೀಟರ್ ಚಲನವಲನಗಳ ಮೇಲೆ ಹೆಚ್ಚು ನಿಗಾ ಇಡಲು ತಿಳಿಸಿದ್ದಾರೆ.
ಜೂನ್ 22 ರಂದು ರಶೀದ್ ಮಲಬಾರಿ ಸಹಚರ ಕರೀಂ ಅಲಿ ಹತ್ಯೆ ನಡೆದಿದೆ. ಜೂನ್ 24 ರಂದು ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್ ಕೊಲೆಯಾಗಿದೆ. ಜುಲೈ 2 ರಂದು ಫೈನಾನ್ಸಿಯರ್ ಮದನ್ ಕೊಲೆ ನಡೆದಿದೆ. ಜುಲೈ 3ಕ್ಕೆ ಡಿಜೆ ಹಳ್ಳಿಯಲ್ಲಿ ಕೃಷ್ಣಮೂರ್ತಿ ಕೊಲೆಯಾಗಿದೆ. ಹಳೆ ವೈಷಮ್ಯ ಹಿನ್ನೆಲೆ ನಗರದಲ್ಲಿ ಪ್ರತಿದಾಳಿಗಳು ಹೆಚ್ಚಾಗಿವೆ. ಮದನ್ ಹಾಗೂ ರೇಖಾರನ್ನು ಹಾಡಹಗಲೇ ಹತ್ಯೆಗೈದಿದ್ದರು. ಹೀಗಾಗಿ ರೌಡಿಗಳ ಮೇಲೆ ಕಣ್ಣಿಟ್ಟು ಕಠಿಣ ಕ್ರಮಕೈಗೊಳ್ಳಲು ಕಮಲ್ಪಂತ್ ಸೂಚಿಸಿದ್ದಾರೆ.
NEWS DESK
TIMES OF BENGALURU