ಬೈಕ್ ಕದಿಯುತ್ತಿದ್ದವರ ಸೆರೆ: 58 ವಾಹನಗಳು ವಶ

ಬೆಂಗಳೂರು: ಪೂರ್ವ ವಿಭಾಗದ ಐದು ಪೊಲೀಸ್‌ ಠಾಣೆಗಳಲ್ಲಿ ದಾಖಲಾಗಿದ್ದ ದ್ವಿಚಕ್ರ ವಾಹನ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ16 ಆರೋಪಿಗಳನ್ನು ಬಂಧಿಸಿ 38 ಲಕ್ಷ ರೂ. ಮೌಲ್ಯದ 58 ದ್ವಿಚಕ್ರವಾಹನ ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ಕಂಠೀರವ ಸ್ಟೇಡಿಯಂನಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಗರ ಪೊಲೀಸ್‌ ಆಯುಕ್ತ ಕಮಲ್‌ ಪಂತ್‌, ವೀಲ್ಹಿಂಗ್‌ ನಡೆಸಲು ಹಾಗೂ ಜಾಲಿ ರೈಡ್‌ಗಾಗಿ ಬೈಕ್‌ ಕದಿಯುತ್ತಿದ್ದ ವಿಮಲ್‌ ರಾಜ್‌, ವಿನೋದ್‌ನ್ನು ಹಲಸೂರು ಠಾಣೆ ಪೊಲೀಸರು ಬಂಧಿಸಿ 6.5 ಲಕ್ಷ ರೂ. ಬೆಲೆ ಬಾಳುವ11 ದ್ವಿಚಕ್ರ ವಾಹನಗಳ ವಶಪಡಿಸಿಕೊಂಡಿದ್ದಾರೆ.

ಆರೋಪಿಗಳು ವೀಲ್ಹಿಂಗ್‌ ಮಾಡಲು ಹಾಗೂ ಜಾಲಿ ರೈಡ್‌ಗಾಗಿ ಮನೆ ಮುಂದೆ ನಿಲ್ಲಿಸಿದ್ದ ವಾಹನಗಳ ಲಾಕ್‌ ಮುರಿದು ಹಾಗೂ ನಕಲಿ ಕೀಗಳನ್ನು ಉಪಯೋಗಿಸಿ ವಾಹನಗಳನ್ನು ಕಳ್ಳತನ ಮಾಡುತ್ತಿದ್ದರು. ಬಾಣಸವಾಡಿ ಪೊಲೀಸರು ದಿಲೀಪ್‌, ರಂಗನಾಥ್‌, ಮೊಹಮ್ಮದ್‌ ಸಾಹಿಲ್‌, ಮೊಹಮ್ಮದ್‌ ಮಕ್ಸೂದ್‌, ಸೈಯದ್‌ ಜಬೀ, ಅಹಮದ್‌ ಖಾನ್‌, ಸೈಯದ್‌ ಅಸ್ಲಂ ಅವರನ್ನು ಬಂಧಿಸಿ 22 ಲಕ್ಷ ರೂ. ಮೌಲ್ಯದ 28 ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಕಳ್ಳತನ ಮಾಡಿದ ವಾಹನಗಳನ್ನು ಕೋಲಾರ, ಹೊಸಕೋಟೆ ಇನ್ನಿತರ ಕಡೆಗಳಲ್ಲಿ ಮಾರಾಟ ಮಾಡುತ್ತಿದ್ದರು ಎಂದು ಅವರು ಹೇಳಿದರು.

NEWS DESK

TIMES OF BENGALURU