ಆಫ್ರಿಕರನ್ನು ಬೇಕಂತಲೇ ಟಾರ್ಗೆಟ್ ಮಾಡಲಾಗುತ್ತಿದೆ

ಬೆಂಗಳೂರು: ಬೆಂಗಳೂರಿನಾದ್ಯಂತ ಡ್ರಗ್ಸ್ ಪ್ರಕರಣದಲ್ಲಿ ಹೆಚ್ಚಾಗಿ ಆಫ್ರಿಕನ್ ಪ್ರಜೆಗಳೇ ಸಿಕ್ಕಿಬೀಳುತ್ತಿದ್ದು, ಬೆಂಗಳೂರು ಪೊಲೀಸರು ಎಷ್ಟೇ ಎಚ್ಚರಿಕೆ ನೀಡಿದರೂ ಅವರು ಪುಂಡಾಟ ನಿಲ್ಲಿಸುತ್ತಿಲ್ಲ. ಬೆಂಗಳೂರಿನ ಹಲವೆಡೆ ಅಕ್ರಮವಾಗಿ ವಾಸ್ತವ್ಯ ಹೂಡಿರುವ ಆಫ್ರಿಕಾದ ಹಲವು ದೇಶದ ಪ್ರಜೆಗಳು, ಮಾದಕ ವಸ್ತು ಜಾಲದಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದಾರೆ. ಈ ಹಿಂದೆ ಒಮ್ಮೆ ಆಫ್ರಿಕನ್ನರನ್ನ ಒಗ್ಗೂಡಿಸಿ ಭೇಟಿಯಾಗಿದ್ದ ಬೆಂಗಳೂರು ಪೊಲೀಸರು, ಅಪರಾಧ ಕೃತ್ಯದಲ್ಲಿ ಭಾಗಿಯಾಗದಂತೆ ಎಚ್ಚರಿಕೆ ಜತೆಗೆ ಮನವಿ ಸಹ ಮಾಡಿದ್ದರು. ಅಷ್ಟಾದ ನಂತರವೂ ಅವರು ತಪ್ಪು ತಿದ್ದುಕೊಳ್ಳದ ಕಾರಣ ವಿಶೇಷ ಕಾರ್ಯಾಚರಣೆ ನಡೆಸಿದ್ದ 100 ಕ್ಕೂ ಹೆಚ್ಚು ಸಿಸಿಬಿ ಅಧಿಕಾರಿಗಳು ಮತ್ತು ಪೊಲೀಸರು ವೀಸಾ ಅವಧಿ ಮುಗಿದ ಬಳಿಕವೂ ವಾಸವಿದ್ದ 100 ಜನರನ್ನು ಪತ್ತೆ ಮಾಡಿದ್ದರು, ದಾಳಿ ವೇಳೆ 90 ಎಕ್ಸ್ಟೇಸಿ ಟ್ಯಾಬ್ಲೆಟ್, 25 ಗ್ರಾಂ ಗಾಂಜಾ ಸಹ ಪತ್ತೆಯಾಗಿತ್ತು. ಆದರೆ, ಈ ಕಾರ್ಯಾಚರಣೆ ವಿರುದ್ಧ ಇದೀಗ ನೈಜೀರಿಯಾದ ಸಾಮಾಜಿಕ ಕಾರ್ಯಕರ್ತರು ಧ್ವನಿ ಎತ್ತಿದ್ದಾರೆ.

ಮಾದಕ ವಸ್ತು ಜಾಲದಲ್ಲಿ ಪದೇ ಪದೇ ಕಾಣಿಸಿಕೊಳ್ಳುತ್ತಿರುವ ನೈಜೀರಿಯನ್ ಪ್ರಜೆಗಳನ್ನು ಬೇಕಂತಲೇ ಗುರಿಯಾಗಿಸಿ ದಾಳಿ ಮಾಡಲಾಗುತ್ತಿದೆ ಎಂದು ನೈಜೀರಿಯಾದ ಸಾಮಾಜಿಕ ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನೈಜೀರಿಯಾದಲ್ಲೇ ಕುಳಿತು ಸಾಮಾಜಿಕ ಜಾಲತಾಣಗಳ ಮೂಲಕ ಈ ಬಗ್ಗೆ ಪೋಸ್ಟ್ ಹಂಚಿಕೊಳ್ಳುತ್ತಿರುವ ಅವರು, ಆಫ್ರಿಕನ್ ಪ್ರಜೆಗಳೇ ಪೊಲೀಸ್ ಕಾರ್ಯಾಚರಣೆಯಲ್ಲಿ ಮುಖ್ಯ ಭೂಮಿಕೆಗೆ ಬರುತ್ತಿರುವುದು ಏಕೆ? ಆಫ್ರಿಕರನ್ನು ಬೇಕಂತಲೇ ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

NEWS DESK

TIMES OF BENGALURU